ಜಿಲ್ಲೆ

ಲಿಂಗಧಾರಣೆ ಸಂಸ್ಕಾರದ ಮೆಟ್ಟಿಲು ಇದ್ದಂತೆ

ಚಾಮರಾಜನಗರ: ದೇಹದ ಮೇಲೆ ಲಿಂಗ ಪೂಜೆ ಮಾಡುವುದರಿಂದ ಸಂಸ್ಕಾರದ ಮೆಟ್ಟಿಲುಗಳನ್ನು ಹತ್ತಿದಂತೆ ಎಂದು ಹುಲ್ಲಹಳ್ಳಿ ವಿರಕ್ತ ಮಠದ ಚನ್ನಮಲ್ಲದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಅರಕಲವಾಡಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಿದ್ದಮಲ್ಲೇಶ್ವರ ಪಟ್ಟದ ಮಠದ 28ನೇ ವರ್ಷದ ಆರಾಧನಾ ಮಹೋತ್ಸವ ಹಾಗೂ ನೂತನ ಪ್ರಾರ್ಥನಾ ಮಂದಿರದ ಉದ್ಘಾಟನೆಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ದಿನಮಾನದಲ್ಲಿ ವಿಭೂತಿ ಹಚ್ಚಿಕೊಂಡು ಲಿಂಗ ಪೂಜೆ ಮಾಡುವುದಕ್ಕೆ ನಾಚಿಕೆಪಡುತ್ತಿದ್ದಾರೆ. ಆಗಾದರೇ ಸಂಸ್ಕಾರ ಹೇಗೆ ತಾನೇ ಬರುತ್ತದೆ. ವಿಭೂತಿ ಧರಿಸಿ ಪೂಜೆ ಮಾಡುವುದು ಅಂತಃಕರಣ ಶುದ್ಧಿಯ ಸರಳ ವಿಧಾನವಾಗಿದೆ. ಅಂಗದ ಮೇಲೆ ಲಿಂಗವಿದ್ದರೆ ನಿತ್ಯವೂ ಮಡಿ ಇದ್ದಂತೆ ಎಂದರು.

ಗ್ರಾಮೀಣ ಭಾಗದಲ್ಲಿ ವ್ಯವಸಾಯದ ಭೂಮಿಯನ್ನು ಮಾರಾಟ ಮಾಡಿ ಕೂಲಿಗೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಧಾರ್ಮಿಕ ಆಚರಣೆಗೆ ಮುಂದಾದರೆ ಮಾನಸಿಕವಾಗಿ ಸದೃಢರಾಗುವ ತೆಗೆ ಸ್ಥಳೀಯವಾಗಿ ನೆಲೆಯೂರಬಹುದು ಎಂದು ಸಲಹೆ ನೀಡಿದರು.

ಕಾರಾಪುರ ವಿರಕ್ತ ಮಠದ ಬಸವರಾಜಸ್ವಾಮೀಜಿ ಮಾತನಾಡಿ, ಮಠಗಳ ಅಭಿವೃದ್ಧಿಗೆ ಗ್ರಾಮೀಣ ಭಕ್ತರ ಸಹಕಾರ ಅತ್ಯಗತ್ಯ. ಧಾರ್ಮಿಕ ಸಭೆಗಳಲ್ಲಿ ಪಾಲ್ಗೊಳ್ಳುವುದರಿಂದ ಭಕ್ತಿ, ನೆಮ್ಮದಿ ನೆಲೆಸುತ್ತದೆ. ಆತ್ಮದ ಸ್ವರೂಪವನ್ನು ನೋಡಲು ಭಕ್ತಿಪೂರ್ವಕ ಲಿಂಗಪೂಜೆ ಸಹಕಾರಿ ಎಂದರು.

ಈ ಸಂದರ್ಭದಲ್ಲಿ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೂತನ ಪ್ರಾರ್ಥನಾ ಮಂದಿರವನ್ನು ಉದ್ಘಾಟಿಸಿದರು. ಮದ್ಯಾಹ್ನ ಪ್ರಸಾದ ವಿನಿಯೋಗ ನಡೆಯಿತು. ಶ್ರೀಸಿದ್ದಮಲ್ಲೇಶ್ವರ ಪಟ್ಟದ ಮಠದ ಬಸವಣ್ಣಸ್ವಾಮೀಜಿ, ಪಡಗೂರು ಅಡವಿ ಮಠದ ಶಿವಲಿಂಗೇಂದ್ರಸ್ವಾಮೀಜಿ, ಮರಿಯಾಲ ಮುರುಘರಾಜೇಂದ್ರ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಚಾಮರಾಜನಗರ ವಿರಕ್ತ ಮಠದ ಚನ್ನಬಸವಸ್ವಾಮೀಜಿ, ಮಹಾಂತ ಸ್ವಾಮೀಜಿ, ಸಿದ್ದಮಲ್ಲಪ್ಪಸ್ವಾಮೀಜಿ ಹಾಗೂ ವಿವಿಧ ಮಠಗಳ ಸ್ವಾಮೀಜಿಗಳು ಹಾಜರಿದ್ದರು.

ಪುಷ್ಪಾಂದೋಳಿಕೋತ್ಸವ:

ಆರಾಧನಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಪುಷ್ಪಾಂದೋಳಿಕೋತ್ಸವ ನಡೆಯಿತು.

ಆಲಹಳ್ಳಿ ಪಟ್ಟದ ಮಠದ ಇಮ್ಮಡಿ ಬಸಪ್ಪಸ್ವಾಮಿಗಳು, ಮಹಾಂತೇಶ್ವರ ಮಠದ ಪರಶಿವಮೂರ್ತಿ ಸ್ವಾಮೀಜಿ, ಕುಂದೂರು ಬೆಟ್ಟ ರಸಸಿದ್ದೇಶ್ವರ ಮಠದ ನಂಜುಂಡಸ್ವಾಮಿ, ಕುರುಬೂರು ಪಟ್ಟದ ಮಠದ ಮಲ್ಲಿನಾಥಶಿವಾಚಾರ್ಯ ಸ್ವಾಮಿ, ಬಿನಕನಹಳ್ಳಿ ಪಟ್ಟದ ಮಠದ ಇಮ್ಮಡಿ ಬಸವಲಿಂಗಸ್ವಾಮಿ ಅವರನ್ನು ಪುಷ್ಪಾಂದೋಳಿಯಲ್ಲಿ ಕೂರಿಸಿ. ವೀರಗಾಸೆ ಕುಣಿತ, ಭಜನೆ ಹಾಗೂ ಕಲಾ ತಂಡಗಳೊಡನೆ ಗ್ರಾಮದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.