ಜಿಲ್ಲೆ

ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಕರ್ನಾಟಕ ಸ್ವಾಭಿಮಾನ ನಡಿಗೆ ಚಾಲನೆ

ಹಾಸನ: ಲೈಂಗಿಕ ಅಲ್ಪಸಂಖ್ಯಾತರು ಸಮಾಜದಲ್ಲಿ ವಿಭಿನ್ನ ಹಾಗೂ ವಿಶೇಷತೆಯನ್ನು ಹೊಂದಿದ್ದು, ಅವರನ್ನು ಅವರ ಕುಟುಂಬ ಮತ್ತು ಸಮಾಜ ಸಮಾನವಾಗಿ ಒಪ್ಪಿಕೊಳ್ಳಬೇಕು ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಮನೋಹರ್ ಹೇಳಿದರು.

ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಪ್ರಕತಿ ಸಮುದಾಯ ಸೇವಾ ಸಂಸ್ಥೆ ಹಾಗೂ ಸಂಗಮದ ಸಂಯುಕ್ತಾಶ್ರಯದಲ್ಲಿ ಹಮಿಕೊಳ್ಳಲಾಗಿದ್ದ ‘’ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಕರ್ನಾಟಕ ಸ್ವಾಭಿಮಾನ ನಡಿಗೆ-2024 ಮತ್ತು ಸೌಹಾರ್ದ ಸಮೂಹ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೈಂಗಿಕ ಅಲ್ಪಸಂಖ್ಯಾತರಿಗೆ ಸರಕಾರ ಶೇ.1 ರಷ್ಟು ಮೀಸಲಾತಿ ನೀಡಿದ್ದು ,ಇದರಿಂದ ಲೈಂಗಿಕ ಅಲ್ಪಸಂಖ್ಯಾತರಿಗೆ ಉಪಯೋಗವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಮೀಸಲಾತಿ ನೀಡಿರುವಂತೆ ಆಯಾ ಹುದ್ದೆಗಳಿಗೆ ತಕ್ಕಂತೆ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಬೇರೆ ನಿಯಮಾವಳಿಗಳನ್ನು ಮಾಡಬೇಕು. ಕೆಲಸಕ್ಕೆ ಬೇಕಾದ ಕೋಚಿಂಗ್ ಹಾಗೂ ಮೂಲಸೌಕರ್ಯಗಳನ್ನು ಒದಗಿಸಬೇಕು ಆಗ ಮಾತ್ರ ಆ ಮೀಸಲಾತಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಅವಕಾಶ ದೊರೆಯುತ್ತದೆ ಎಂದರು.

ಸಮಾಜದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಮುಕ್ತವಾಗಿ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಸಮಾಜದಲ್ಲಿ ಇದಕ್ಕೆ ಒಪ್ಪಿಗೆ ಇಲ್ಲ ಮೊದಲು ಪೋಷಕರು ಲೈಂಗಿಕ ಅಲ್ಪಸಂಖ್ಯಾತ ಮಕ್ಕಳನ್ನು ಒಪ್ಪಿಕೊಳ್ಳಬೇಕು ಎಂದು ಕರೆ ನೀಡಿದರು.

ಇತ್ತೀಚಿಗೆ ಸಲಿಂಗಕಾಮಿ, ಪರಲಿಂಗಕಾಮಿಗಳ ಸ್ವತಂತ್ರದ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಅದನ್ನು ಮೊದಲು ಬಿಡಬೇಕು ಅದಕ್ಕಾಗಿ ಲೈಂಗಿಕ ಅಲ್ಪಸಂಖ್ಯಾತರು ಪ್ರತಿಯೊಬ್ಬರು ಬೀದಿಗಿಳಿದು ಹೋರಾಟ ಮಾಡಬೇಕು. ಆಗಮತ ಮಾತ್ರ ಸಮಾಜದಲ್ಲಿ ಬದಲಾವಣೆ, ಸಮಾನತೆ, ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈ ಮೂಲಕ ಅಲ್ಪಸಂಖ್ಯಾತರಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ ಎಂದರು.

ಮಾಜಿ ಶಾಸಕ ಎಚ್.ಎಂ.ವಿಶ್ವನಾಥ ಮಾತನಾಡಿ, ಅಲ್ಪಸಂಖ್ಯಾತರು ಸಮಾಜದಲ್ಲಿ ವಿಭಿನ್ನತೆಯನ್ನು ಹೊಂದಿದ್ದು ಅವರ ಈ ಆಚರಣೆ ಸಮಾನತೆಯತ್ತ ಸಾಗುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇವರ ಈ ಕಾರ್ಯಕ್ರಮಕ್ಕೆ ಸಹಕಾರ ನೀಡದೆ ಇರುವುದು ಶೋಚನೀಯ ಎಂದರು.

ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲಎಂಬ ಮಾತಿನಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಲೈಂಗಿಕ ಅಲ್ಪಸಂಖ್ಯಾತರನ್ನು ನೋಡುತ್ತಿರುವ ಭಾವನೆ ಸರಿಯಲ್ಲ, ಲೈಂಗಿಕ ಅಲ್ಪಸಂಖ್ಯಾತರ ಆಚಾರ ವಿಚಾರವನ್ನು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಕ್ಕೆ ಅಧಿಕಾರಿಗಳು ಆಗಮಿಸುವುದು ಅಗತ್ಯವಿತ್ತು ಆದರೆ ಯಾರೊಬ್ಬರೂ ಬರದೆ ನಿರ್ಲಕ್ಷ ಮಾಡಿದ್ದಾರೆ ಎಂದರು.

ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡುವ ಅನಾಚಾರಗಳನ್ನು ಲೈಂಗಿಕ ಅಲ್ಪಸಂಖ್ಯಾತರು ಮಾಡುವುದಿಲ್ಲ ಹಾಗಾಗಿ ನಮಲ್ಲಿ ಅವರೇ ಸರ್ವೆ ಶ್ರೇಷ್ಠರು. ಡಾ. ಬಿ.ಆರ್.ಅಂಬೇಡ್ಕರ್ ತಮ ಸಂವಿಧಾನದ ಮೂಲಕ ಸಮಾನತೆಗೆ ಆದ್ಯತೆ ನೀಡಿದ್ದಾರೆ. ಅದನ್ನು ಪ್ರತಿಯೊಬ್ಬ ಲೈಂಗಿಕ ಅಲ್ಪಸಂಖ್ಯಾತರು ಬಳಸಿಕೊಳ್ಳಬೇಕು ತಮ ಹಕ್ಕನ್ನು ಗೌರವದಿಂದ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ ರೂಪ ಹಾಸನ್, ಸಾಮಾಜಿಕ ಹೋರಾಟಗಾರ ಮರಿ ಜೋಸೆಫ್ ಭೀಮ್, ಬ್ರಿಗೇಡ್ ಅಧ್ಯಕ್ಷ ರಾಜೇಶ್, ಪ್ರಕತಿ ಸಮುದಾಯ ಸೇವಾ ಸಂಸ್ಥೆಯ ಅಧ್ಯಕ್ಷೆ ವರ್ಷ ಹಾಸನ್, ಸತೀಶ್ ಪಟೇಲ್ ಇತರರು ಹಾಜರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಕರ್ನಾಟಕವನ್ನು ವಿವಿಧ ಸಮುದಾಯಗಳು ಸೌಹಾರ್ದತೆಯಿಂದ ಬಾಳುವ ಶಾಂತಿಯ ತೋಟವನ್ನಾಗಿ ಮಾಡೋಣ ಘೋಷಣೆಯೊಂದಿಗೆ ಕರ್ನಾಟಕ ಸ್ವಾಭಿಮಾನ ನಡಿಗೆಯ ಮೆರವಣಿಗೆಯಲ್ಲಿ ವಿವಿಧ ಸಂಘಟನೆ, ಸಾಹಿತಿಗಳು, ಸಂಘ ಸಂಸ್ಥೆಗಳಿಂದ ಬೆಂಬಲ ದೊರಕಿದ್ದು, ನಗರದ ಮಹಾರಾಜ ಪಾರ್ಕ್‌ನಿಂದ ಆರಂಭವಾಗಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸಾಗಿತು.