ಕಲಬುರಗಿ: ಸಾಮಾಜಿಕ ಜೀವನದಲ್ಲಿ ಅತ್ಯಂತ ಸಂಕಷ್ಟದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ೨೦೦ ಕೋಟಿ ರೂ. ಮೀಸಲು ಇಡಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ ಅನುಷಾ ಹಿರೇಮಠ ಆಗ್ರಹಿಸಿದರು.
ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ೨೦೦ ಕೋಟಿ ರೂ. ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ವಾರ್ಷಿಕವಾಗಿ ಮೀಸಲಿಡುವುದಾಗಿ ಘೋಷಿಸಿತ್ತು. ಆದರೆ ಸರ್ಕಾರ ಬಂದು ಎರಡು ವರ್ಷಗಳಾದರೂ ಘೋಷಣೆ ಮಾಡಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಸಮುದಾಯದವರಿಗೆ ವಸತಿ ಸೌಲಭ್ಯ ನೀಡಲು ಪ್ರತ್ಯೇಕ ಯೋಜನೆಯನ್ನು ರೂಪಿಸಬೇಕು, ಉದ್ಯಮ ಶೀಲತೆಯಲ್ಲಿ ತೊಡಗಿಸಿಕೊಳ್ಳಲು ವಾರ್ಷಿಕ ಪ್ರತಿ ವ್ಯಕ್ತಿಗೆ ಎರಡು ಲಕ್ಷ ರೂ. ಆರ್ಥಿಕ ನೆರವು ನೀಡಲು ಬಜೆಟ್‌ನಲ್ಲಿ ಹಣ ಮೀಸಲು ಇಡಬೇಕು, ಉಚಿತ ಲಿಂಗ ಪರಿವರ್ತನೆ ಶಸ್ತç ಚಿಕಿತ್ಸೆ ಮತ್ತು ಶಸ್ತç ಚಿಕಿತ್ಸೆ ನಂತರ ಆರು ತಿಂಗಳ ಆರೈಕೆಗೆ ಆರ್ಥಿಕ ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು.
ಶೇ.೧ ಮೀಸಲನ್ನು ಉದ್ಯೋಗ, ಶಿಕ್ಷಣದಲ್ಲಿ ಘೋಷಿಸಿದ್ದು, ಅದೇ ಮಾದರಿ ತರಬೇತಿ ಮತ್ತು ಕೋಚಿಂಗ್ ನೀಡಲು ಬಜೆಟ್ ಮೀಸಲು ಇಡಬೇಕು, ಲೈಂಗಿಕ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ನಿಗಮವನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಭೀರಲಿಂಗ, ಬಸವರಾಜ ಪಾಟೀಲ್, ಭೀಮರಾವ ಬನ್ನೂರ, ಚಾಂದಿನಿ ಖುರೇಷಿ ಇತರರಿದ್ದರು