ಜಿಲ್ಲೆ

ಲಿಂಗತ್ವ ಅಲ್ಪಸಂಖ್ಯಾತರ ನಿಗಮ ಮಂಡಳಿ ಸ್ಥಾಪಿಸಿ

ಚಾಮರಾಜನಗರ: ರಾಜ್ಯ ಸರ್ಕಾರ ಎಲ್ಲಾ ಇಲಾಖೆಗಳ ಹುದ್ದೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ.1 ರಷ್ಟು ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟಗಾರ್ತಿ ಹಾಗೂ ಜೀವ ಸಂಸ್ಥೆಯ ಅಧ್ಯಕ್ಷೆ ಪಿ.ಉಮಾ ಒತ್ತಾಯಿಸಿದರು.

ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ಕಳಂಕ, ತಾರತಮ್ಯ, ಸಮಾಜದ ತಿರಸ್ಕಾರ ಹಾಗೂ ಮೂಲ ಸೌಕರ್ಯಗಳಿಂದ ವಂಚಿತರಾಗಿ ಬದುಕುತ್ತಿದ್ದೇವೆ. ಈ ನಿಟ್ಟಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಾಜ್ಯದಲ್ಲಿ ಕರ್ನಾಟಕ ಟ್ರಾನ್ಸ್ ಜೆಂಡರ್ ಪಾಲಿಸಿ-2017 ಅನುಮೋದನೆಗೊಂಡಿದೆ. ಈ ಕಾಯ್ದೆಯ ಪ್ರಕಾರ ಟ್ರಾನ್ಸ್‌ಜೆಂಟರ್‌ಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.1 ರಷ್ಟು ಮೀಸಲಾತಿ ಅವಕಾಶ ಕಲ್ಪಿಸಬೇಕಿದೆ. ಆದರೇ ರಾಜ್ಯ ಸರ್ಕಾರ ಕಾಯ್ದೆಯನ್ನು ಅನುಷ್ಠಾನಗೊಳಿಸದೆ ಲೈಂಗಿಕ ಅಲ್ಪಸಂಖ್ಯಾತರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಟ್ರಾನ್ಸ್‌ಜೆಂಡರ್‌ಗಳಿಗೆ ಶೇ.1 ರಷ್ಟು ಮೀಸಲಾತಿಯನ್ನು ನೀಡಬೇಕು. ಅದರಲ್ಲಿ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸಬೇಕು. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಿಂಗ ಪರಿವರ್ತನೆ ಶಸಚಿಕಿತ್ಸೆ ಸೇವೆಯನ್ನು ಒದಗಿಸಬೇಕು. ರಾಜ್ಯ ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ನಿಗಮ ಮಂಡಳಿಯನ್ನು ಸ್ಥಾಪಿಸಿ, ಸಮುದಾಯದ ಒಟ್ಟಾರೆ ಅಭಿವೃದ್ಧಿಗೆ ವಾರ್ಷಿಕ 200 ಕೋಟಿ ರೂ, ಅನುದಾನವನ್ನು ಮೀಸಲಿಡಬೇಕು. ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರದ ವತಿಯಿಂದಲೇ ನಿವೇಶನ ಹಾಗೂ ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಸಮತಾ ಸೊಸೈಟಿ ಸಂಸ್ಥೆಯ ಸದಸ್ಯರಾದ ದೊಡ್ಡಸ್ವಾಮಿ, ದೇವಿಯಮ್ಮ, ಮಂಜು ಹಾಜರಿದ್ದರು.

ರಾಜಕೀಯ ಮೀಸಲಾತಿಯನ್ನು ನೀಡಿ:

ಕುಟುಂಬ ಹಾಗೂ ಸಮಾಜದಿಂದ ತಿರಸ್ಕಾರಕ್ಕೆ ಒಳಗಾಗುವ ಲೈಂಗಿಕ ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಲು ಇಂದಿಗೂ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರ ಸರ್ವತೋಮುಖ ಅಭಿವೃದ್ಧಿಗೆ ಉದ್ಯೋಗದ ಜತೆಗೆ ರಾಜಕೀಯ ಮೀಸಲಾತಿಯನ್ನು ನೀಡಬೇಕು ಎಂದು ಸಮತಾಸೊಸೈಟಿ ಸಂಸ್ಥೆಯ ಅಧ್ಯಕ್ಷೆ ಎಚ್.ಜಿ.ದೀಪಾಬುದ್ದೇ ಆಗ್ರಹಿಸಿದರು. ಲೈಂಗಿಕ ಅಲ್ಪಸಂಖ್ಯಾತರು ಲಿಂಗ ಪರಿವರ್ತನೆ ಶಸಚಿಕಿತ್ಸೆಗೆ ಒಳಗಾಗುತ್ತಾರೆ. ಆಗಾಗಿ ಅವರಿಗೆ ಅಗತ್ಯ ಚಿಕಿತ್ಸೆ ನೀಡುವ ಉದ್ದೇಶದಿಂದ ವೈದ್ಯಕೀಯ ಶಿಕ್ಷಣದಲ್ಲಿ ಈ ಕುರಿತು ಪಠ್ಯವನ್ನು ಅಳವಡಿಸಬೇಕು. ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಜಾಹೀರಾತುಗಳಲ್ಲಿ ನಮ್ಮನ್ನು ಪ್ರತ್ಯೇಕವಾಗಿ ಗುರುತಿಸಬೇಕು. ಜನಪ್ರತಿನಿಧಿಗಳು ಸದನದಲ್ಲಿ ನಮ್ಮ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.