ಜಿಲ್ಲೆ

ಲಿಂಗ ಪೂಜೆ ಅತ್ಯಂತ ಪವಿತ್ರ

ಚಿತ್ರದುರ್ಗ: ಮಾನವನ ಎದೆಯ ಮೇಲೆ ಲಿಂಗ ಪ್ರತಿಷ್ಠಾಪನೆ, ನಿತ್ಯ ಪೂಜಾ ಕಾರ್ಯದಲ್ಲಿ ತೊಡಗುವುದು ಅತ್ಯಂತ ಪವಿತ್ರವಾದುದು ಎಂದು ನೊಣವಿನಕೆರೆಯ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠ ಶಿವಾನುಭವ ಚರವರ್ಯ ಕರಿವೃಷಭ ದೇಶೀಕೇಂದ್ರದ ಶ್ರೀ ಶಿವಯೋಗಿಶ್ವರ ಸ್ವಾಮೀಜಿ ಸಲಹೆ ನೀಡಿದರು.

ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಬೇಡ ಜಂಗಮ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ವೀರಶೈವ ವೀರಮಹೇಶ್ವರ ಜಂಗಮ ವಟುಗಳಿಗೆ ಉಚಿತ ಶಾಸ್ತ್ರೋಕ್ತ ದೀಕ್ಷೆ, ಧರ್ಮ ಸಭೆಯಲ್ಲಿ ಮಾತನಾಡಿದರು.

ಸಮಾಜದ ಯುವ ಜನಾಂಗದ ಉತ್ತಮ ಭವಿಷ್ಯಕ್ಕಾಗಿ ಲಿಂಗ ದೀಕ್ಷೆ ನೀಡಲಾಗುತ್ತಿದ್ದು, ಮುಂದೆ ಜಂಗಮ ಗುರುಗಳನ್ನಾಗಿ ಮಾಡಲು ಸಹಕಾರಿಯಾಗಿದೆ. 2013ರಿಂದ ಆರಂಭವಾಗಿದ್ದು, ಪ್ರತಿ ವರ್ಷವೂ ನಡೆಸಲಾಗುವುದು. ವೀರಶೈವ ಪದ್ಧತಿ ಜೀವಾತ್ಮಾವಾಗಿದ್ದು, ವೇದ ಪಾಠಶಾಲೆಗಳನ್ನು ಆರಂಭಿಸಿ, ಸಮುದಾಯ ಮುನ್ನಡೆಸಬೇಕಿದೆ ಎಂದು ಕಿವಿಮಾತು ಹೇಳಿದರು.

ಜಂಗಮರು ಮೊದಲು ಸಂಘಟಿತರಾಗಬೇಕು. ಭಸ್ಮ, ಮಂತ್ರ, ಪೂಜೆ, ಶಿವನ ಆರಾಧನೆ, ಗುರು ಕಾರುಣ್ಯ ಜಂಗಮ ತತ್ವದ ಮೂಲ ಮಂತ್ರವಾಗಿದೆ ಎಂದರು.

ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವನ ಬದುಕು ಧರ್ಮ ಸಂಸ್ಕಾರದೊಳಗೆ ಬೆರೆಯಬೇಕು. ನಿತ್ಯ ಸ್ನಾನ, ಪೂಜೆ ನಂತರವೇ ಪ್ರಸಾದ ಸ್ವೀಕರಿಸಬೇಕು. ಆಗ ಮಾತ್ರ ಉತ್ತಮ ಸಂಸ್ಕಾರ ಹೊಂದಲು ಸಾಧ್ಯ ಎಂದು ಹೇಳಿದರು.

ನಾವೆಲ್ಲರೂ ಕಾಯಕದಲ್ಲಿ ಭಗವಂತನನ್ನು ಕಾಣಬೇಕಿದೆ. ಕರ್ತವ್ಯದಲ್ಲಿ ಸಿಗುವ ಆನಂದ ಬೇರೆಲ್ಲೂ ಸಿಗಲಾರದು. ಜಂಗಮರು ಬೇರೆಯವರ ಬದುಕಿಗೆ ದಾರಿ ದೀಪವಾಗುವ, ಸಂಸ್ಕಾರ ನೀಡುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ಬೇಡ ಜಂಗಮ ಸಮಾಜದ ಅಧ್ಯಕ್ಷ ಎಂ.ಟಿ.ಮಲ್ಲಿಕಾರ್ಜನ ಸ್ವಾಮಿ, ಮುಖಂಡರಾದ ಕೆ.ಎಂ.ವೀರೇಶ್, ಶಿವನಗೌಡ, ಸುರೇಶ್, ಕೆ.ಸಿ.ರುದ್ರೇಶ್, ಕೆ.ಎನ್.ವಿಶ್ವನಾಥಯ್ಯ, ಚನ್ನಯ್ಯ, ಶಶಿಧರ್ ಬಾಬು, ಕರಿಬಸಯ್ಯ, ರೇವಣಸಿದ್ದಯ್ಯ, ಎಸ್.ಷಡಾಕ್ಷರಯ್ಯ, ಮಂಜುನಾಥ, ಸಿ.ಎಚ್.ಆಶಾ ಇತರರಿದ್ದರು.