ಗುಂಡ್ಲುಪೇಟೆ ಕೇರಳ ರಸ್ತೆಯಲ್ಲಿ ಲಾರಿ ಡಿಕ್ಕಿಹೊಡೆದು ಸಾವಿಗೀಡಾದ ಗರ್ಭಿಣಿ ಆನೆಯನ್ನು ಅರಣ್ಯಾಧಿಕಾರಿಗಳು ಪರಿಶೀಲಿಸಿದರು. 
ಜಿಲ್ಲೆ

ಲಾರಿಗೆ ಸಿಲುಕಿ ಗರ್ಭೀಣಿ ಆನೆ ಸಾವು

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಮಂಗಳವಾರ ರಾತ್ರಿ ಅತೀ ವೇಗದಿಂದ ಬಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಗರ್ಭಿಣಿ ಆನೆ ಮೃತಪಟ್ಟಿದ್ದು, ಪರಿಸರ ಪ್ರೇಮಿಗಳಿಗೆ ಆಘಾತವುಂಟು ಮಾಡಿದೆ.

ಮಂಗಳವಾರ ರಾತ್ರಿ ಕೇರಳಕ್ಕೆ ಬಂಡೀಪುರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಅಪಘಾತ ಸಂಭವಿಸಿದೆ. ಮೂಲೆಹೊಳೆ ಚೆಕ್ ಪೋಸ್ಟ್‌ನಿಂದ ವೇಗವಾಗಿ ಬರುತ್ತಿದ್ದ ಲಾರಿ ಮದ್ದೂರು ವಲಯದ ಐರನ್ ಬ್ರಿಡ್ಜ್ ಗಸ್ತಿನ ಕೊಂಡಯ್ಯನಪಾಲ ಸಮೀಪ ಸಾಗುವಾಗ ಸುಮಾರು (-- ) ವರ್ಷ ವಯಸ್ಸಿನ ಗರ್ಭಿಣಿ ಆನೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾಗಿದೆ.

ಕೂಡಲೇ ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಚಾಲಕ ತಮಿಳುನಾಡು ಮೂಲದ ಅಯ್ಯ0್ಪಸ್ವಾಮಿ(35), ಆನಂದಕುಮಾರ್(35) ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಡಾ.ರಮೆಶ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಬುಧವಾರ ಬೆಳಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಅರಣ್ಯ ಇಲಾಖೆಯ ಪಶುವೈದ್ಯ ಡಾ.ವಾಸಿಂ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕಳೇಬರವನ್ನು ಅರಣ್ಯಪ್ರದೇಶದೊಳಗೆ ಎಳೆದು ಹಾಕಲಾಯಿತು.

ಈ ಬಗ್ಗೆ ಮದ್ದೂರು ವಲಯಾರಣ್ಯ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರನ್ವಯ ಸೆಕ್ಷನ್ 9/39 ಆರ್/ಡಬ್ಲೂ 2/16ಸಿ, 2/36, 51, 55 ರ ಅಡಿ ಪ್ರಕರಣ ದಾಖಲಿಸಿದ್ದಾರೆ.

ರಾತ್ರಿ ಸಂಚಾರ ನಿರ್ಬಂಧಕ್ಕೆ ಹಿಂದೆಯೂ ಇಂಥದೇ ಅಪಘಾತಗಳು ಸಂಭವಿಸಿ ಮೂರು ಆನೆಗಳು ಸಾವಿಗೀಡಾಗಿದ್ದವು. ಇದೇ ರಸ್ತೆಯಲ್ಲಿ ಆನೆಯೊಂದು ಲಾರಿಗೆ ಸಿಲುಕಿ ಸತ್ತಿದ್ದರೆ, ಮತ್ತೊಂದಕ್ಕೆ ವೇಗವಾಗಿ ಸಂಚರಿಸುತ್ತಿದ್ದ ರಾಜಹಂಸ ಬಸ್ ಡಿಕ್ಕಿ ಹೊಡೆದಿತ್ತು. ಈ ಹಿನ್ನೆಲೆಯಲ್ಲಿ 2009ರಲ್ಲಿ ಜಿಲ್ಲಾಡಳಿತ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಹುಲಿ ಯೋಜನೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಇದನ್ನು ಕೇರಳ ನ್ಯಾಯಾಲಯದಲ್ಲಿ ಪ್ರಶ್ನಿಸಿದರೂ ರದ್ದುಪಡಿಸಲಾಗಿತ್ತು. ಬಳಿಕ ಕೇರಳ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು ವಿಚಾರಣೆ ನಡೆಯುತ್ತಲೇ ಇದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿಯು ರಾತ್ರಿ ವೇಳೆ ಹೆದ್ದಾರಿಯಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಪರಿಶೀಲಿಸಿತ್ತು. ರಾತ್ರಿ ಸಂಚಾರ ನಿರ್ಬಂಧದ ನಂತರ ವನ್ಯಜೀವಿಗಳ ಸಹಜ ಜೀವನಶೈಲಿಗೆ ಅಡಚಣೆ ಕಡಿಮೆಯಾಗಿದ್ದರಿಂದ ಅವುಗಳ ಸಂತತಿ ಹೆಚ್ಚಾಗಿರುವ ಬಗ್ಗೆ ವರದಿ ಸಲ್ಲಿಸಿದೆ.

ರಾತ್ರಿ 9ಕ್ಕೆ ಬಂದ್ ಆಗುವುದರೊಳಗೆ ಚೆಕ್‌ಪೋಸ್ಟ್ ದಾಟುವ ಆತುರದಲ್ಲಿ ವಾಹನಗಳು ಅತಿವೇಗದಿಂದ ಸಂಚರಿಸುತ್ತಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ಅಧಿಕ ವೇಗ ನಿಯಂತ್ರಣಕ್ಕೆ ಮದ್ದೂರಿನಿಂದ ಮೂಲೆಹೊಳೆವರೆಗೆ 18 ಕಿ.ಮೀ. ಅಂತರದಲ್ಲಿ 38 ರಸ್ತೆ ಡುಬ್ಬಗಳನ್ನು ನಿರ್ಮಿಸಲಾಗಿದೆ. ಇದರ ಜತೆಗೆ ಅರಣ್ಯ ಇಲಾಖೆ ಅಲ್ಲಲ್ಲಿ ಕ್ಯಾಮರಾ ಅಳವಡಿಸಿ, ಅತೀ ವೇಗದಿಂದ ಸಾಗುವ ವಾಹನಗಳಿಗೆ ದಂಡ ವಿಧಿಸುವ ಮೂಲಕ ಅಪಘಾತಗಳಿಗೆ ಕಡಿವಾಣ ಹಾಕಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.