ಜಿಲ್ಲೆ

ಲಾರಿಗೆ ತಗುಲಿದ ವಿದ್ಯುತ್

ಪಾಂಡವಪುರ: ತಾಲೂಕಿನ ಮಡಿಕೆಪಟ್ಟಣ (ಚಿಕ್ಕಮರಳಿ ಗೇಟ್) ಸಮೀಪ ಕಬ್ಬಿನ ತರಗು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ರಸ್ತೆ ಮಧ್ಯದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿ ಲಾರಿ ಭಾಗಶಃ ಸುಟ್ಟು ಹೋಗಿದೆ.


ತಾಲೂಕಿನ ದೊಡ್ಡಬ್ಯಾಡರಹಳ್ಳಿ ಕಡೆಯಿಂದ ಶನಿವಾರ ಮೈಸೂರು ಕಡೆಗೆ ಶುಂಠಿ ಬೆಳೆಗಾಗಿ ಕಬ್ಬಿನ ತರಗು ತುಂಬಿಕೊಂಡು ತೆರಳುವ ವೇಳೆ ಘಟನೆ ಸಂಭವಿಸಿದೆ. ನಿಗದಿತ ಎತ್ತರಕ್ಕಿಂತ ಅತಿಯಾಗಿ ತರಗು ತುಂಬಿದ್ದರಿಂದ ರಸ್ತೆಗೆ ಅಡ್ಡಲಾಗಿ ಹಾದು ಹೋಗಿದ್ದ ವಿದ್ಯುತ್ ಲೈನ್‌ಗೆ ತರಗು ತಗುಲಿದ್ದು, ಶಾರ್ಟ್ ಸರ್ಕ್ಯೂಟ್ ಸಂಭವಿಸಿ ತರಗಿಗೆ ಬೆಂಕಿ ಹೊತ್ತಿಕೊಂಡಿದೆ. ಬೈಕ್ ಸವಾರನೊಬ್ಬ ತರಗಿಗೆ ಬೆಂಕಿ ಬಿದ್ದಿರುವುದನ್ನು ಗಮನಿಸಿ ಚಾಲಕನಿಗೆ ತಿಳಿಸಿದ ಪರಿಣಾಮ ಚಾಲಕ ರಸ್ತೆ ಬದಿಗೆ ಲಾರಿ ನಿಲ್ಲಿಸಿ ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿ ತಹಬದಿಗೆ ಬರಲಿಲ್ಲ.


ಸಮಯಕ್ಕೆ ಸರಿಯಾಗಿ ಇದೇ ಮಾರ್ಗವಾಗಿ ಆಗಮಿಸುತ್ತಿದ್ದ ಜೆಸಿಬಿಯ ಸಹಾಯದಿಂದ ಲಾರಿಗೆ ತುಂಬಲಾಗಿದ್ದ ತರಗನ್ನು ನೆಲಕ್ಕೆ ಎಳೆದ ಪರಿಣಾಮ ಬೆಂಕಿ ಹೆಚ್ಚಿನ ರೀತಿಯಲ್ಲಿ ಲಾರಿಯನ್ನು ವ್ಯಾಪಿಸಲಿಲ್ಲ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲದಿದ್ದರೂ ಲಾರಿಯ ಬಹುತೇಕ ಭಾಗ ಸುಟ್ಟು ಹೋಗಿದೆ.


ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅರ್ಧ ತಾಸು ಶ್ರಮವಹಿಸಿ ಬೆಂಕಿಯನ್ನು ಸಂಪೂರ್ಣ ನಂದಿಸಿದರು.