ಅಪಘಾತದಲ್ಲಿ ಮೃತಪಟ್ಟಿರುವ ಅಶ್ವಥ್. 
ಜಿಲ್ಲೆ

ಲಾರಿಗೆ ಕಾರು ಡಿಕ್ಕಿಯಾಗಿ ಡಿ-ಗ್ರೂಪ್ ನೌಕರ ಸಾವು

ನಾಗಮಂಗಲ: ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಿರುಮಲಾಪುರ ಗೇಟ್ ಸಮೀಪ ಬುಧವಾರ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಡಿ-ಗ್ರೂಪ್ ನೌಕರ, ಎಚ್.ಭೂವನಹಳ್ಳಿ ನಿವಾಸಿ ಅಶ್ವಥ್(24) ಮೃತರು. ಅದೇ ಆಸ್ಪತ್ರೆಯಲ್ಲಿ ಔಷಧ ಶಾಖೆ ಸಿಬ್ಬಂದಿಯಾಗಿರುವ ಪ್ರತಾಪ್‌ಗೆ ತೀವ್ರ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಸ್ನೇಹಿತನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪಟ್ಟಣದ ಹೋಟೆಲ್‌ವೊಂದರಲ್ಲಿ ಮುಗಿಸಿ ನಾಗಮಂಗಲದ ಕಡೆಗೆ ಹಿಂದಿರುಗಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ನಿತೀಶ್‌ಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಬೆಳ್ಳೂರು ಠಾಣೆ ಪಿಎಸ್‌ಐ ರವಿಕುಮಾರ್ ಭೇಟಿ ನೀಡಿ, ಪರಿಶೀಲಿಸಿದರು. ಬಿ.ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ದೇಹ ಹಸ್ತಾಂತರಿಸಲಾಯಿತು. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.