ಜಿಲ್ಲೆ

ಲಾರಿಗಳ ಮೂಲಕ ಹಾರುಬೂದಿ ಸಾಗಾಣಿಕೆಗೆ ಕಡಿವಾಣ ಹಾಕಲು ದಲಿತ ಸೇನೆ ಮನವಿ

ರಾಯಚೂರು: ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಕಾರ್ಖಾನೆಗಳ ಹಾರುಬೂದಿ ಸಾಗಿಸುವ ಲಾರಿಗಳಿಂದ ರಸ್ತೆ ಸಂಚಾರ ಹಾಗೂ ಸ್ಥಳೀಯರಿಗೆ ತೊಂದರೆ ಉಂಟಾಗುತ್ತಿದ್ದು, ಕೂಡಲೇ ಹಾರುಬೂದಿ ಸಾಗಾಣಿಕೆಗೆ ಲಾರಿ ಬಳಕೆಯನ್ನು ರದ್ದುಪಡಿಸುವಂತೆ ದಲಿತ ಸೇನೆಯಿಂದ ನಗರದ ಡಿಸಿ ಕಚೇರಿ ಎದುರು ಕಚೇರಿಯ ಸ್ಥಾನಿಕ ಅಧಿಕಾರಿ ಪರಶುರಾಮ್‌ಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ 167ರಲ್ಲಿ ಹಾರುಬೂದಿ ಸಾಗಿಸುವ ಲಾರಿಗಳಿಂದ ಟ್ರಾಫಿಕ್ ಸಮಸ್ಯೆ ಹಾಗೂ ಬೂದಿಯನ್ನು ಓವರ್ ಲೋಡ್ ಮಾಡಿ ಸಾಗಿಸುವುದರಿಂದ ರಸ್ತೆಯ ತುಂಬ ದೂಳು ತುಂಬಿಕೊಂಡು ಎದುರಿಗೆ ಬರುವ ವಾಹನಗಳು ಗೋಚರಿಸದೇ ಅಪಘಾತಗಳು ಹೆಚ್ಚುತ್ತಿವೆ. ಜತೆಗೆ ಸುತ್ತಲಿನ ಜನರಿಗೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಂಡುಬರುತ್ತಿವೆ. ಹಾರುಬೂದಿ ಸಾಗಿಸಲು ರೈಲು ವ್ಯವಸ್ಥೆ ಇದ್ದರೂ ಕೂಡ ಲಾರಿಗಳ ಮೂಲಕ ಸಾಗಿಸಲಾಗುತ್ತಿದೆ. ಕೂಡಲೇ ರಸ್ತೆಗಳ ಮೂಲಕ ಬೂದಿ ಸಾಗಾಣಿಕೆಯನ್ನು ತಡೆಯುವಂತೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಾರುತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೆ.ಮಧುಕಾಂತ, ತಾಲೂಕು ಪ್ರಧಾನ ಕಾರ್ಯದರ್ಶಿ ಭೀಮೇಶ, ಪ್ರಮುಖರಾದ ಬಸವರಾಜ, ಕೃಷ್ಣ, ವೆಂಕಟೇಶ್, ಸುರೇಶ ಬಾಬು, ಬಾಬುರಾವ್, ಕಾಶಿನಾಥ, ತಾಯಪ್ಪ ಸೇರಿದಂತೆ ಇತರರಿದ್ದರು.