ಜಿಲ್ಲೆ

ಲಾಭುರಾಮ ಎದುರು ಹತ್ತಾರು ಸವಾಲು

ಕೇಶವಮೂರ್ತಿ ವಿ.ಬಿ., ಹುಬ್ಬಳ್ಳಿ

ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ವಿದ್ಯಾನಗರಿ ಧಾರವಾಡದ ಪೊಲೀಸ್ ಆಯುಕ್ತರಾಗಿ ಚುಕ್ಕಾಣಿ ಹಿಡಿದ ಲಾಭುರಾಮ ಅವರ ಎದುರು ಕ್ರಿಕೆಟ್ ಬೆಟ್ಟಿಂಗ್, ಮಟ್ಕಾ, ಇಸ್ಪೀಟ್ ಜೂಜಾಟ, ಭೂ ಮಾಫಿಯಾ, ಸೇರಿ ಹತ್ತಾರು ಸವಾಲುಗಳಿವೆ.

ರಾಜಸ್ತಾನದ ಬಾಡಮೇರ್ ಜಿಲ್ಲೆ ಮೂಲದ ಲಾಬೂರಾಮ 2004ರ ಐಪಿಎಸ್ ಕರ್ನಾಟಕ ಕೇಡರ್​ನ ಅಧಿಕಾರಿಯಾಗಿದ್ದು, ದಕ್ಷಿಣ ಕನ್ನಡ, ಚಿತ್ರದುರ್ಗ, ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಖಡಕ್ ಅಧಿಕಾರಿ ಎಂದೇ ಖ್ಯಾತರಾಗಿರುವ ಲಾಬೂರಾಮ ಬೆಂಗಳೂರಿನಲ್ಲಿ ರೌಡಿಸಂ ಮಟ್ಟ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಲವು ಪ್ರಮುಖ ಸರಗಳ್ಳತನ, ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದರು.

ಐಪಿಎಲ್ ಸಂದರ್ಭದಲ್ಲಿ ಅವ್ಯಾಹತವಾಗಿರುವ ಕ್ರಿಕೆಟ್ ಬೆಟ್ಟಿಂಗ್ ತಡೆಗಟ್ಟುವ ಬಹುದೊಡ್ಡ ಸವಾಲು ಪೊಲೀಸ್ ಆಯುಕ್ತರ ಮೇಲಿದೆ. ಮುಂಬೈ, ದುಬೈನಿಂದ ಲೇನ್ ಮಷಿನ್ ತಂದು ಬೆಟ್ಟಿಂಗ್ ಆಡುವ ಜಾಲ ಸಕ್ರಿಯವಾಗಿದೆ. ಹುಬ್ಬಳ್ಳಿ ಮೂಲಕ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೋಟ್ಯಂತರ ರೂ. ಬೆಟ್ಟಿಂಗ್ ದಂಧೆ ನಡೆಸುವ ಭಾರಿ ಕುಳಗಳು ಇಲ್ಲಿವೆ. ಐಪಿಎಲ್ ಆರಂಭವಾದ (ಸೆ. 19) ದಿನದಿಂದ ಈವರೆಗೆ ಏಳೆಂಟು ಬೆಟ್ಟಿಂಗ್ ಪ್ರಕರಣಗಳು ಪತ್ತೆಯಾಗಿರುವುದು ಅದಕ್ಕೆ ಪುಷ್ಠಿ ನೀಡುತ್ತದೆ. ಅವಳಿ ನಗರದಲ್ಲಿ ಬೆಟ್ಟಿಂಗ್ ದಂಧೆ ಮೇಲೆ ಖಾಕಿಪಡೆ ಹದ್ದಿನ ಕಣ್ಣು ಇಟ್ಟಿದ್ದರಿಂದ ಗ್ರಾಮೀಣ ಭಾಗಕ್ಕೆ ಸ್ಥಳಾಂತರಗೊಂಡಿದೆ. ಹಳ್ಳಿಗಳಲ್ಲಿ ಡಾಬಾ, ತೋಟದ ಮನೆಗಳಲ್ಲಿ ರಾತ್ರಿ ಬೆಟ್ಟಿಂಗ್ ಆಡಿ ಸದ್ದಿಲ್ಲದೆ ನಗರಕ್ಕೆ ಬಂದು ಸೇರಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಹು-ಧಾ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿದ್ದ ಪಿ. ಕೃಷ್ಣಕಾಂತ ಅವರೇ ಪೊಲೀಸ್ ವರಿಷ್ಠಾಧಿಕಾರಿ ಆಗಿರುವುದರಿಂದ ಎರಡೂ ತಂಡಗಳ ಸಮನ್ವಯದೊಂದಿಗೆ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬಹುದಾಗಿದೆ. ಕೆಲ ತಿಂಗಳಿಂದ ತಣ್ಣಗಾಗಿದ್ದ ಮಟ್ಕಾ, ಇಸ್ಪೀಟ್ ಜೂಜಾಟ ಮತ್ತೆ ಶುರುವಾಗಿದೆ. ಜೂಜಾಟದಲ್ಲಿ ಬಂಧಿಸಲ್ಪಟ್ಟವರು ಮರುದಿನವೇ ಬಿಂದಾಸ್ ಆಗಿ ಓಡಾಡಿಕೊಂಡಿದ್ದು, ಅವರಿಗೆ ಕಾನೂನು ಭಯ ಇಲ್ಲದಂತಾಗಿದೆ.

ಮಸಾಜ್ ಪಾರ್ಲರ್, ಲಾಡ್ಜ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುವವರು ಮತ್ತೆ ಮುನ್ನಲೆಗೆ ಬರುತ್ತಿದ್ದಾರೆ. ಮನೆಗಳ್ಳತನ, ಬೈಕ್ ಕಳ್ಳತನ, ಅಕ್ರಮ ಸಾರಾಯಿ ಮಾರಾಟ, ಹಫ್ತಾ ವಸೂಲಿ ಮತ್ತಿತರ ಅಕ್ರಮ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಹೊಣೆ ನೂತನ ಪೊಲೀಸ್ ಆಯುಕ್ತರ ಮೇಲಿದೆ. ಅಕ್ರಮ ಚಟುವಟಿಕೆ ನಡೆಸುವವರಿಗೆ ಒಳಗೊಳಗೆ ಕೈಜೋಡಿಸುವ ಕೆಲ ಸಿಬ್ಬಂದಿ ಮೇಲೆ ಹದ್ದಿನ ಕಣ್ಣು ಇಡಬೇಕಿದೆ.

ಟ್ರಾಫಿಕ್ ಸಮಸ್ಯೆ ಹೆಚ್ಚು: ಸ್ಮಾರ್ಟ್ ಸಿಟಿ, ಅಮೃತ ಯೋಜನೆ, ಸಿಆರ್​ಎಫ್ ಅನುದಾನದಡಿ ರಸ್ತೆ ನಿರ್ಮಾಣ ಕಾಮಗಾರಿಗಳಿಂದಾಗಿ ಅವಳಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೇಳತೀರದ್ದಾಗಿದೆ. ಸೂಕ್ತ ರ್ಪಾಂಗ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಕಂಗಾಲಾಗಿದ್ದಾರೆ. ಸುಗಮ ಸಂಚಾರಕ್ಕೆ ಪೊಲೀಸ್ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಇಂದು ಅಧಿಕಾರ ಸ್ವೀಕರಿಸಿದ್ದೇನೆ. ಎರಡು ದಿನ ಅಧಿಕಾರಿಗಳೊಂದಿಗೆ ರ್ಚಚಿಸಿ ಅವಳಿ ನಗರದ ಪರಿಸ್ಥಿತಿಯ ಅವಲೋಕನ ಮಾಡುತ್ತೇನೆ. ನಂತರ ಮುಂದಿನ ಕ್ರಮಗಳ ಕುರಿತು ತಿಳಿಸುತ್ತೇನೆ. | ಲಾಭುರಾಮ ಪೊಲೀಸ್ ಆಯುಕ್ತ

ರೌಡಿಗಳು ಬಾಲ ಬಿಚ್ಚಿದರೆ ಜೋಕೆ…; ಹು-ಧಾ ಅವಳಿ ನಗರ ವ್ಯಾಪ್ತಿಯಲ್ಲಿ ಸಾವಿರಕ್ಕೂ ಅಧಿಕ ರೌಡಿಶೀಟರ್​ಗಳಿದ್ದಾರೆ. ಹಿಂದಿನ ಆಯುಕ್ತರು ಕಠಿಣ ಕ್ರಮ ಕೈಗೊಂಡ ಕಾರಣ ಬಹುತೇಕರು ತಾವಾಯಿತು ತಮ್ಮ ಕೆಲಸವಾಯಿತು ಎಂದು ಸುಮ್ಮನಿದ್ದರೆ, ಕೆಲವರು ಮಾತ್ರ ತಮ್ಮ ಅಕ್ರಮ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ. ಇದರ ಮಧ್ಯೆ ಪುಡಿ ರೌಡಿಗಳು ಚಾಕು- ಚೂರಿ ಹಿಡಿದು ಕ್ಷುಲ್ಲಕ ಕಾರಣಕ್ಕೆ ರಸ್ತೆ ಮಧ್ಯೆ ಹೊಡೆದಾಡಿಕೊಂಡು ಹತ್ಯೆಗೈದ ಹಲವು ಪ್ರಕರಣಗಳು ಇತ್ತೀಚೆಗೆ ನಡೆದಿವೆ. ಹಾಗಾಗಿ, ರೌಡಿಗಳು ಬಾಲ ಬಿಚ್ಚದಂತೆ ಆಗಾಗ ಬಿಸಿ ಮುಟ್ಟಿಸಬೇಕಾದ ಅನಿವಾರ್ಯತೆ ಇದೆ.

*