ಜಿಲ್ಲೆ

ಲಾಭದಲ್ಲಿ ಕೂಡುಮಂಗಳೂರು ಸಹಕಾರ ಸಂಘ

ರಾಜಣ್ಣ

ಕುಶಾಲನಗರ: ಕೂಡುಮಂಗಳೂರು ರಾಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್‌ಕುಮಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಸಂಘದ ಸಭಾಂಗಣದಲ್ಲಿ ನಡೆಯಿತು.


ಸಭೆಯಲ್ಲಿ ಅಭಿವೃದ್ಧಿಗೆ ಪೂರಕವಾದ ಅನೇಕ ಅಭಿಪ್ರಾಯಗಳನ್ನು ಸದಸ್ಯರು ವ್ಯಕ್ತಪಡಿಸಿದರು.


2022-23ನೇ ಸಾಲಿನ ಲೆಕ್ಕಪರಿಶೋಧನಾ ವರದಿ, ಸಾಲಸೌಲಭ್ಯಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.
ಮೆಕ್ಕೆಜೋಳ, ಸಿಹಿಗೆಣಸು, ಭತ್ತದ ಬೆಳೆಗಳು ಒಣಗುತ್ತಿರುವುದರಿಂದಾಗಿ ಮುಂಗಾರು ಮಳೆ ಕ್ಷೀಣಗೊಂಡಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಮತ್ತು ಸಹಕಾರ ಸಂಘದ ನಿರ್ದೇಶಕರು ಜಂಟಿಯಾಗಿ ರೈತರ ಜಮೀನಿನಲ್ಲಿ ಬೆಳೆ ಒಣಗುತ್ತಿರುವುದನ್ನು ಸಮೀಕ್ಷೆ ನಡೆಸುವಂತೆ ರೈತ ಸದಸ್ಯರು ಒತ್ತಾಯಿಸಿದರು.


ಪ್ರತ್ಯೇಕವಾದ ಸಹಕಾರ ಸಂಘವನ್ನು ಕೂಡಿಗೆ ಭಾಗದಲ್ಲಿ ತೆರೆಯಲು ಬಂದ ಅರ್ಜಿಗಳ ಬಗ್ಗೆ ಮಹಾಸಭೆಯಲ್ಲಿ ಅಧ್ಯಕ್ಷರು ಮಂಡಿಸಿದಾಗ ಆ ಅರ್ಜಿಗಳನ್ನು ತಿರಸ್ಕರಿಸಲಾಯಿತು.


ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಮಾತನಾಡಿ, 2022-23ನೇ ಸಾಲಿನಲ್ಲಿ 117.95 ಕೋಟಿ ರೂ. ವ್ಯವಹಾರ ನಡೆಸಿದ್ದು, ಇದರಲ್ಲಿ 25.31 ಕೋಟಿ ರೂ.ಗಳಷ್ಟು ಸಾಲವನ್ನು ವಿವಿಧ ಯೋಜನೆಗಳಲ್ಲಿ ಸದಸ್ಯರಿಗೆ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.


ಈ ಸಾಲಿನಲ್ಲಿ ಸಂಘ ವಿವಿಧ ಸಾಲ ಸೌಲಭ್ಯಗಳನ್ನು ರೈತರಿಗೆ ನೀಡುವ ಮತ್ತು ಇತರ ವ್ಯವಹಾರಗಳ ಮೂಲಕ 70.33 ಲಕ್ಷ ರೂ.ಲಾಭ ಗಳಿಸಿದೆ ಎಂದು ತಿಳಿಸಿದರು.


ನಂತರ ರೈತರಿಗೆ ಅನುಕೂಲವಾಗುವಂತೆ ವಿವಿಧ ಹೊಸ ಯೋಜನೆಗಳನ್ನು ಮತ್ತು ಸಂಘದ ಪ್ರಗತಿ ಪೂರಕವಾದ ಯೋಜನೆಯ ಮೂಲಕ ಸೀಗೆಹೊಸೂರು ಮತ್ತು ಕೂಡಿಗೆ ಸಹಕಾರ ಸಂಘದ ಜಾಗದಲ್ಲಿ ನಬಾರ್ಡ್ ಸಹಕಾರದೊಂದಿಗೆ 2 ಕೋಟಿ ರೂ.ಗೂ ಹೆಚ್ಚು ಹಣವನ್ನು ಉಪಯೋಗಿಸುವ ಮೂಲಕ ಸುಸಜ್ಜಿತವಾದ ರೈತ ಸಮುದಾಯದ ಭವನ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ವಿವಿಧ ಸಾಲಗಳ ಜತೆಗೆ ಹೊಸ ಸಾಲಗಳಾದ ಹೈನುಗಾರಿಕೆ, ದ್ವಿಚಕ್ರ ವಾಹನ, ಆಟೋರಿಕ್ಷಾ, ನಾಲ್ಕು ಚಕ್ರದ ಮಿನಿ ವಾಹನಗಳು ಮತ್ತು ಮಾರ್ಟಗೇಜ್ ಸಾಲಗಳನ್ನು ನೀಡಲು ಆಡಳಿತ ಮಂಡಳಿ ಚಿಂತಿಸಿದೆ ಎಂದರು.


ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಎಂ.ಪಿ.ಮೀನ ಮಂಡಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಮತ್ತು ಪದವಿ ಪೂರ್ವ ಕಾಲೇಜು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಪುರಸ್ಕರಿಸಲಾಯಿತು.


ಸಭೆಯಲ್ಲಿ ಉಪಾಧ್ಯಕ್ಷ ಟಿ.ಪಿ.ಹಮೀದ್, ನಿರ್ದೇಶಕರಾದ ತಮ್ಮಣೇಗೌಡ, ಅರುಣ್ ಕುಮಾರ್, ಪಾರ್ವತಮ್ಮ, ಕೃಷ್ಣೇಗೌಡ, ರಮೇಶ್, ಪವಿತ್ರಾ, ನಾಗರಾಜು, ಕುಮಾರ್, ಮುಖ್ಯ ವೃತ್ತಿ ನಿರ್ದೇಶಕ ಆರ್.ಕೆ.ನಾಗೇಂದ್ರ ಬಾಬು, ಚಂದ್ರಶೇಖರ್, ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ಗಿರೀಶ್ ಕುಮಾರ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧಿಕಾರಿ ಅನುರಾಧಾ ಹಾಗೂ ಅಧಿಕಾರಿಗಳು ಹಾಜರಿದ್ದರು.