ಸೋಮವಾರಪೇಟೆ: ಒಕ್ಕಲಿಗರ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಶನಿವಾರ ಒಕ್ಕಲಿಗರ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ಜೆ.ದೀಪಕ್ ಅವರ ನೇತೃತ್ವದ ನಡೆಯಿತು.
ದೀಪಕ್ ಮಾತನಾಡಿ, ಸಹಕಾರಿ ಸಂಘದಲ್ಲಿ ಇವರೆಗೆ ಒಟ್ಟು 339 ಸದಸ್ಯರಿದ್ದಾರೆ. 2024-25ನೇ ಸಾಲಿನಲ್ಲಿ ಸಂಘವು ಒಟ್ಟು 4,19,119 ರೂ.ಲಾಭಗಳಿಸಿದೆ ಎಂದರು. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಗಳಿಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸಲಾಗುವುದರೊಂದಿಗೆ ಸದಸ್ಯರನ್ನು ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ರಾಜ್ಯ ಸರ್ಕಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಗಣತಿಯ ಸೆ.23ರಿಂದ ನಡೆಯಲಿದೆ. ಒಕ್ಕಲಿಗರಲ್ಲಿ ಜಾತಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಸಭೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಒಕ್ಕಲಿಗರು ಸುಳ್ಳು ಮಾಹಿತಿ ನೀಡಬಾರದು. ನೈಜ ಸ್ಥಿತಿಯನ್ನು ತಿಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕೆ.ಬಿ.ಸುರೇಶ, ನಿರ್ದೇಶಕರಾದ ಪಿ.ಕೆ.ರವಿ, ಗಿರೀಶ್ ಮಲ್ಲಪ್ಪ, ಎಚ್.ಎಸ್. ವಸಂತಕುಮಾರ್, ಎಚ್.ಎಂ.ನತೀಶ್ ಮಂದಣ್ಣ, ಎಚ್.ಕೆ.ಪ್ರಸ್ಸಿ, ಜಿ.ಪಿ.ಕಿಶೋರ್ ಕುಮಾರ್, ಲೋಕೇಶ್ವರಿ ಗೋಪಾಲ್, ಯು.ಎಲ್.ಸುಮಲತಾ,ಕೆ.ಟಿ.ದಯಾನಂದ, ಆಂತರಿಕ ಲೆಕ್ಕ ಪರಿಶೋಧಕ ಕೆ.ಎಲ್.ವಿಜೇತ್ ಇತರರಿದ್ದರು.