ಶಿಡ್ಲಘಟ್ಟ: ರಾಜ್ಯದ ವಿವಿಧ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿಯ ವರದಿ ಬರಬೇಕಿದ್ದು, ಆ ಬಳಿಕ ನೌಕರರಿಗೆ ಅನುಕೂಲವಾಗಲಿದೆ ಎಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರ ಹೊರವಲಯದ ಹಿತ್ತಲಹಳ್ಳಿ ಬಳಿಯ 4 ಎಕರೆ ಪ್ರದೇಶದಲ್ಲಿ ಸುಮಾರು 4.72 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೆಎಸ್‌ಆರ್‌ಟಿಸಿ ನೂತನ ಬಸ್ ಘಟಕವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಡೀಸೆಲ್ ದರ ತುಟ್ಟಿಯಾಗಿರುವ ಕಾರಣ ಸಾರಿಗೆ ಸಂಸ್ಥೆಗಳ ಆರ್ಥಿಕ ನಷ್ಟ ತಪ್ಪಿಸಲು ಎಲೆಕ್ಟ್ರಿಕ್ ಬಸ್‌ಗಳು ಮತ್ತು ಪರಿಸರಸ್ನೇಹಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಬಳಕೆಯ ಬಸ್‌ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರದ ಸಹಕಾರದೊಂದಿಗೆ ಪ್ರಸ್ತುತ ಇರುವ ಹಳೆಯ ಬಸ್‌ಗಳನ್ನು ಬದಲಿಸಿ ಹೊಸ ಬಸ್‌ಗಳನ್ನು ಖರೀದಿಸಲಾಗುವುದು. ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಕಟ್ಟಕಡೆಯ ಗ್ರಾಮಕ್ಕೂ ತಲುಪಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಗೆ ನಷ್ಟವಾಗಿ ನೌಕರರಿಗೆ ವೇತನ ನೀಡಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾಗ ಹಾಲಿ ಮತ್ತು ಹಿಂದಿನ ಮುಖ್ಯಮಂತ್ರಿಗಳು ಒಟ್ಟು 3 ಸಾವಿರ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದರು. ಸಾರಿಗೆ ಸಂಸ್ಥೆಯನ್ನು ಲಾಭದಾಯಕವಾಗಿ ಮಾಡುವುದಕ್ಕಿಂತಲೂ ಜನರ ಸೇವೆ ಮಾಡುವ ಸಂಸ್ಥೆಯನ್ನಾಗಿ ಕಟ್ಟುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು.
ಸಂಸದ ಎನ್.ಮುನಿಸ್ವಾಮಿ ಮಾತನಾಡಿ, ಇಂಧನಗಳ ಬೆಲೆ ಏರಿಕೆಯಾಗುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲಿಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ. ರೈತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಹಲವರಿಗೆ ನಮ್ಮ ಸಾರಿಗೆ ಬಸ್ ವ್ಯವಸ್ಥೆ ಮುಖ್ಯ ಅವಶ್ಯಕತೆಯಾಗಿದೆ. ಜನರ ಅವಶ್ಯಕತೆಗಳನ್ನು ಅರಿತುಕೊಂಡು ಅವರಿಗೆ ಅನುಕೂಲಕರವಾಗಿ ಆಡಳಿತ ನಡೆಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಜನರೂ ಅಭಿವೃದ್ಧಿ ಕಾರ್ಯಗಳಲ್ಲಿ ಸರ್ಕಾರದೊಟ್ಟಿಗೆ ಕೈ ಜೋಡಿಸಬೇಕು ಎಂದರು.
ಶಾಸಕ ವಿ.ಮುನಿಯಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ಆನೂರು ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ಪಿ.ಎನ್.ವಿಜಯೇಂದ್ರ, ನಗರಸಭೆ ಅಧ್ಯಕ್ಷೆ ಸುಮಿತ್ರಾರಮೇಶ್, ಉಪಾಧ್ಯಕ್ಷ ಅಪ್ಸರ್‌ಪಾಷ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ, ಕೆಎಸ್‌ಆರ್‌ಟಿಸಿ ಅಧಿಕಾರಿಗಳಾದ ಅರುಣ್.ಡಿ, ರುದ್ರೇಶ್, ರಾಜು ವಿಠಲ್, ಜಗದೀಶ್ ಚಂದ್ರ, ಎನ್.ಕೆ.ಬಸವರಾಜ್, ಪ್ರಭಾಕರ ರೆಡ್ಡಿ, ನಾಗರಾಜ್, ಈಶ್ವರಪ್ಪ, ಮತ್ತಿತರರು ಹಾಜರಿದ್ದರು.
ಮುಷ್ಕರ ಬೇಡ: ರಾಜ್ಯದ ವಿವಿಧ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ದುಡಿಯುವ ಮಹಿಳೆಯರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡುವ ಚಿಂತನೆ ಸರ್ಕಾರದ ಮುಂದಿದೆ. ನೌಕರರ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲು ಸರ್ಕಾರ ಸಿದ್ಧವಿದ್ದು, ನೌಕರರು ಯಾವುದೇ ಕಾರಣಕ್ಕೂ ಮುಷ್ಕರಕ್ಕೆ ಹೋಗಬಾರದು ಎಂದ ಅವರು, ಕೋವಿಡ್ ಸಂದರ್ಭದಲ್ಲಿ ವಿವಿಧ ಕಾರಣಗಳಿಂದ ವಜಾಗೊಂಡಿದ್ದ 3 ಸಾವಿರ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಶ್ರೀರಾಮುಲು ತಿಳಿಸಿದರು.
ಪ್ರತಿ ಗ್ರಾಮಕ್ಕೂ ಬಸ್ ಸೌಕರ್ಯ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಮಾತನಾಡಿ, ಕರೊನಾ ಬರುವುದಕ್ಕೆ ಮೊದಲು ಸಾರಿಗೆ ಸಂಸ್ಥೆ ಲಾಭದಾಯಕ ಸಂಸ್ಥೆಯಾಗಿತ್ತು, ನಂತರ ಸಂಸ್ಥೆ ನಷ್ಟದಲ್ಲಿದೆ. ಸಚಿವ ಶ್ರೀರಾಮುಲು ಅವರು ಸಾರಿಗೆ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿಕ್ಕಾಗಿ ಸಕಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರ ಸಾರಿಗೆ ಇಲಾಖೆಯನ್ನು ಖಾಸಗೀಕರಣ ಮಾಡಲಿಕ್ಕೆ ಹೊರಟಿತ್ತು. ಆದರೆ, ನಮ್ಮ ಸರ್ಕಾರ ಸಂಸ್ಥೆ ನಷ್ಟದಲ್ಲಿದ್ದರೂ ನಿರ್ವಹಣೆ ಮಾಡುವಂತಹ ಬದ್ಧತೆ ತೋರುತ್ತಿದೆ. ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂಬುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದರು.
ದೇಶದಲ್ಲಿ ಪಂಚರಾಜ್ಯಗಳ ಚುನವಣಾ ಫಲಿತಾಂಶದ ನಂತರ ಕಾಂಗ್ರೆಸ್ ಪರಿಸ್ಥಿತಿ ಖೇಲ್ ಖತಂ ದುಖಾನ್ ಬಂದ್. ಇಡೀ ದೇಶದಲ್ಲಿ ಕಾಂಗ್ರೆಸ್ ಧೂಳಿಪಟ ಆಗಿದೆ. ಮುಂಬರುವ 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇದೇ ಪರಿಸ್ಥಿತಿ ಬರಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಆದರೆ ಬಿಜೆಪಿ ಪಕ್ಷದ ಸರ್ಕಾರವೇ ಮುಂದೆ ಅಧಿಕಾರಕ್ಕೆ ಬರಲಿದೆ. ಶ್ರೀರಾಮುಲು, ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
ನಗರಸಭೆಯ ನೂತನ ಕಟ್ಟಡಕ್ಕೆ ಭೂಮಿಪೂಜೆ: ನಗರದ ಹಳೆಯ ಕೆನರಾ ಬ್ಯಾಂಕ್ ಮುಂಭಾಗದಲ್ಲಿರುವ ನಗರಸಭೆಯ ನಿವೇಶನದಲ್ಲಿ ನಗರೋತ್ಥಾನ (ಹಂತ-3) ರ ಯೋಜನೆಯಡಿಯಲ್ಲಿ 2.47 ಕೋಟಿ ರೂ.ಗಳ ವೆಚ್ಚದಲ್ಲಿ ನಗರಸಭೆ ನೂತನ ಕಚೇರಿ ನೂತನ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜು, ಸಂಸದ ಎಸ್.ಮುನಿಸ್ವಾಮಿ, ಶಾಸಕ ವಿ.ಮುನಿಯಪ್ಪ ಭೂಮಿಪೂಜೆ ನೆರವೇರಿಸಿದರು. ಜಿಲ್ಲಾಧಿಕಾರಿ ಆರ್.ಲತಾ, ತಹಸೀಲ್ದಾರ್ ಬಿ.ಎಸ್.ರಾಜೀವ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಪೌರಾಯುಕ್ತ ಆರ್.ಶ್ರೀಕಾಂತ್ ಸೇರಿ ನಗರಸಭೆ ಸದಸ್ಯರು ಹಾಜರಿದ್ದರು.