ಗದಗ: ಕರೊನಾ ವೈರಸ್ ಸಾಂಕ್ರಾಮಿಕ ರೋಗವಾಗಿದ್ದು ಜನರು ವ್ಯಕ್ತಿಗತ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಅವಶ್ಯಕ ವಸ್ತುಗಳ ಕುರಿತು ಅನಗತ್ಯವಾಗಿ ಆತಂಕಕ್ಕೆ ಒಳಗಾಗಬಾರದು ಎಷ್ಟು ತಿಳಿಹೇಳಿದರೂ ಜನರಿಗೆ ಅರ್ಥವೇ ಆಗುತ್ತಿಲ್ಲ. ಗುಂಪುಗುಂಪಾಗಿ ತಿರುಗುತ್ತಿದ್ದಾರೆ. ಪದೇಪದೆ ಮನೆಯಿಂದ ಹೊರಬರುತ್ತಿದ್ದಾರೆ. ಹೀಗಾಗಿ ಗುರುವಾರ ಸ್ವತಃ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಲಾಠಿ ಹಿಡಿದು ಗ್ರೇನ್ ಮಾರುಕಟ್ಟೆಯಲ್ಲಿ ಸಂಚರಿಸಿದರು.
ಪ್ರತಿಯೊಬ್ಬರ ಜೀವದ ಸುರಕ್ಷತೆ ಅತ್ಯಂತ ಮುಖ್ಯ. ಈ ಸಂದರ್ಭದಲ್ಲಿ ಮನೆಯಲ್ಲಿ ಇರುವುದೇ ಕ್ಷೇಮ. ಅದೊಂದೇ ಕರೊನಾದಿಂದ ರಕ್ಷಿಸಿಕೊಳ್ಳುವ ಏಕ ಮಾತ್ರ ಸಾಧನವಾಗಿದೆ ಎಂದು ತಿಳಿ ಹೇಳಿದರು.
ಮನೆಯಿಂದ ಒಬ್ಬರು ಮಾತ್ರ ಅವಶ್ಯಕ ವಸ್ತುಗಳ ಖರೀದಿಗೆ ಬರಬೇಕು ಹಾಗೂ ಪದೇಪದೆ ಹೊರಗೆ ಬರುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಖರೀದಿ ಅಂಗಡಿಗಳ ಮುಂದೆ ವ್ಯಕ್ತಿಗತ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸ್ಥಳ ಗುರುತಿಸಿದ್ದು ಅದರ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಡಿವೈಎಸ್ಪಿ ಪ್ರಲ್ಹಾದ, ಗದಗ-ಬೆಟಗೇರಿ ನಗರಸಭೆ ಪೌರಾಯಕ್ತ ಮನ್ಸೂರ್ ಅಲಿ ಇದ್ದರು.
ಮಾಹಿತಿ ನೀಡುವುದು ಕಡ್ಡಾಯ:
ಗದಗ ಜಿಲ್ಲೆಯ ತಾಂಡಾ, ಗ್ರಾಮ ಹಾಗೂ ನಗರ ಪ್ರದೇಶಗಳಿಗೆ ಹೊರಗಿನಿಂದ ಆಗಮಿಸಿದವರು ಸಾರ್ವಜನಿಕ ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿ ಸಮೀಪದ ತಾಲೂಕು ಅಥವಾ ಗದಗದಲ್ಲಿ ಜಿಮ್ಸ್ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಹೊರಗಿನಿಂದ ಬಂದವರು ಸ್ವಯಂ ಪ್ರೇರಣೆಯಿಂದ ಅಥವಾ ಈ ಕುರಿತು ಮಾಹಿತಿ ಇರುವವರು ಜಿಲ್ಲಾ ಸಹಾಯವಾಣಿ 08372-239177 ಅಥವಾ ಸಮೀಪದ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಾಂಸ ಖರೀದಿಗೆ ಮುಗಿಬಿದ್ದ ಜನ
ಯುಗಾದಿ ಹಬ್ಬದ ಮರುದಿನ ವರ್ಷ ತೊಡಕಿನ ದಿನದಂದು ಮಾಂಸ ಖರೀದಿಗೆ ಜನರು ಮುಗಿಬಿದ್ದರು. ನಗರದ ಜವುಳಗಲ್ಲಿಯಲ್ಲಿ ಗುರುವಾರ ಬೆಳಗ್ಗೆ 3 ತಾಸು ಮಾಂಸ ಖರೀದಿಗೆ ಅವಕಾಶ ಕಲ್ಪಿಸಲಾಯಿತು. ತಂಡೋಪತಂಡವಾಗಿ ಆಗಮಿಸಿ ಜನರು ಖರೀದಿಗೆ ಮುಗಿಬಿದ್ದರು. ಅಂತರ ಕಾಯ್ದುಕೊಳ್ಳದೆ, ಮುಖಕ್ಕೆ ಮಾಸ್ಕ್ ಧರಿಸದೆ ಜನರು ಆಗಮಿಸಿದ್ದರು. ಇದನ್ನು ಗಮನಿಸಿದ ಪೊಲೀಸರು ಮಾಸ್ಕ್ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು. ನಗರದ ಟಾಂಗಾಕೂಟದಲ್ಲಿರುವ ಮೆಡಿಕಲ್ ಸ್ಟೋರ್ಗೆ ಜನರು ಔಷಧ ಖರೀದಿಗಾಗಿ ದೌಡಾಯಿಸಿದರು.