ಜಿಲ್ಲೆ

ಲಾಠಿ ಹಿಡಿದು ರಸ್ತೆಗಿಳಿದ ತಹಸೀಲ್ದಾರ್

ಬಸವಕಲ್ಯಾಣ: ತಾಲೂಕು ದಂಡಾಧಿಕಾರಿಗಳಾದ ತಹಸೀಲ್ದಾರ್ ಸಾವಿತ್ರಿ ಶರಣು ಸಲಗರ್ ಶುಕ್ರವಾರ ಕೈಯಲ್ಲೊಂದು ಲಾಠಿ ಹಿಡಿದು ರಸ್ತೆಗಿಳಿದರು. ಲಾಕ್ಡೌನ್ ನಿಯಮ ಉಲ್ಲಂಘಿಸುವವರಿಗೆ ಲಾಠಿ ಬೀಸುವ ಮೂಲಕ ಬಿಸಿ ಮುಟ್ಟಿಸಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಆಡಳಿತ ಕಟ್ಟುನಿಟ್ಟಿನ ಕ್ರಮ, ಪೊಲೀಸರ ಪರಿಶ್ರಮದ ಮಧ್ಯೆಯೂ ಕೆಲವರು ಅನಗತ್ಯ ರಸ್ತೆಗೆ ಬರುತ್ತಿದ್ದು, ಇಂಥವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಈ ಮಧ್ಯೆ ಬೆಳಗ್ಗೆ ತಹಸೀಲ್ದಾರ್ ಸಾವಿತ್ರಿ ಸ್ವತಃ ನಗರದ ವಿವಿಧೆಡೆ ಸಂಚರಿಸಿ ಅಂಗಡಿಗಳ ಎದುರು ನಿಯಮ ಉಲ್ಲಂಘಿಸಿ ನಿಂತವರಿಗೆ ಲಾಠಿ ರುಚಿ ತೋರಿಸಿ ಚದುರಿಸಿದರು.
ಹಾಲು, ಔಷಧ, ಕಿರಾಣಿ, ತರಕಾರಿ ಖರೀದಿಗೆ ಬೆಳಗ್ಗಿನ 7ರಿಂದ 10ರವರೆಗೆ ಸಮಯ ನಿಗದಿಗೊಳಿಸಲಾಗಿದೆ. ಈ ವೇಳೆ ಅಂಗಡಿ ಮುಂದೆ ಲೈನ್ ಅಥವಾ ಬಾಕ್ಸ್ಗಳನ್ನು ಹಾಕಿ ಅಂತರ ಕಾಯ್ದುಕೊಂಡು ನಿಲ್ಲುವಂತೆ ನಿರ್ದೇಶನ ನೀಡಲಾಗಿದೆ. ಮೂರು ದಿನಗಳಿಂದ ಹೇಳುತ್ತಿದ್ದರೂ ಗಣನೆಗೆ ತೆಗೆದುಕೊಳ್ಳದೆ ಕೆಲ ಅಂಗಡಿ ಮುಂದೆ ಜನ ಗುಂಪಾಗಿ ನಿಂತಿದ್ದನ್ನು ಗಮನಿಸಿದ ತಹಸೀಲ್ದಾರ್ ಅವರು ಖುದ್ದು ಕ್ರಮಕ್ಕೆ ಮುಂದಾಗಿ ಎಲ್ಲರಿಗೂ ಎಚ್ಚರಿಕೆ ನೀಡಿದರು.
ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಅಂಗಡಿಗಳಲ್ಲಿ ಶಿಸ್ತು ಮತ್ತು ಸ್ವಚ್ಛತೆ ಕಾಪಾಡಬೇಕು. ಇಲ್ಲವಾದರೆ ಮುಚ್ಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಲ್ಲಬೇಕು. ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು. ಕಟ್ಟುನಿಟ್ಟಿನ ಕ್ರಮಗಳಿಂದ ರಸ್ತೆಗೆ ಅನಗತ್ಯ ಬರುವ ಜನಸಂಚಾರ ನಿಯಂತ್ರಣಕ್ಕೆ ಬಂದಿದೆ.