ಜಿಲ್ಲೆ

ಲಾಠಿ ರುಚಿಗೂ ಬಗ್ಗದ ಜನ!

ಲಕ್ಷ್ಮೇಶ್ವರ: ಲಾಕ್​ಡೌನ್ ಘೊಷಣೆಯ ಮಧ್ಯೆಯೂ ವಿನಾಕಾರಣ ಸುತ್ತಾಡುವುದು, ತಾಲೂಕಾಡಳಿತ ವಿಧಿಸಿರುವ ಕಟ್ಟಳೆಗಳನ್ನು ಮೀರಿ ನಡೆದುಕೊಳ್ಳುವವರಿಗೆ ಪೊಲೀಸರು ಲಾಠಿ ರುಚಿ ತೋರಿಸುವ ಮತ್ತು ಬಸ್ಕಿ ಹೊಡೆಸುವ, ಬೈಕ್ ವಶಪಡಿಸಿಕೊಳ್ಳುವ ಮೂಲಕ ಬಿಸಿ ಮುಟ್ಟಿಸುತ್ತಿದ್ದ ದೃಶ್ಯಗಳು ಗುರುವಾರ ಪಟ್ಟಣದ ಮಾರ್ಕೆಟ್​ನಲ್ಲಿ ಸಾಮಾನ್ಯವಾಗಿ ಕಂಡು ಬಂದವು.

ನಿತ್ಯ ಬೆಳಗ್ಗೆ 6 ರಿಂದ 9 ರವರೆಗೆ ದಿನಸಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು ಬೈಕ್​ಗಳು ಮಾರ್ಕೆಟ್ ಒಳಗೆ ಬರದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ವೇಳೆ ಜನರು ಬೈಕ್, ಕಾರುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುತ್ತಿದ್ದಾರೆ ಮತ್ತು ಕೆಲವರು ಕಣ್ತಪ್ಪಿಸಿ ಮಾರ್ಕೆಟ್ ಒಳಗೆ ಬರುತ್ತಿದ್ದಾರೆ. ಇಂತವರಿಗೆ ಒಂದಿಷ್ಟು ಬಿಸಿ ಮುಟ್ಟಿಸಲು ಪೊಲೀಸರು ಕೆಲ ಬೈಕ್​ಗಳ ಹವಾ ತೆಗೆದು, ಹಲವರಿಗೆ ಲಾಠಿ ರುಚಿ ತೋರಿಸಿದರು. ಕೆಲ ಬೈಕ್​ಗಳನ್ನು ವಶಪಡಿಸಿಕೊಂಡರು. ಇನ್ನು ಸಾಮಾಜಿಕ ಅಂತರ ಕಾಯದ, ಮಾಸ್ಕ್ ಧರಿಸಿದವರಿಗೆ ಸಾರ್ವಜನಿಕವಾಗಿ ಬಸ್ಕಿ ತಗೆಸಿ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ವಿನಾಕಾರಣ ಸಂಚರಿಸುವ ವಾಹನಗಳ ನಿಯಂತ್ರಣಕ್ಕಾಗಿ ಎಲ್ಲ ಪೆಟ್ರೋಲ್ ಬಂಕ್​ಗಳಲ್ಲಿ ಬೆಳಗ್ಗೆ 9 ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬಳಿಕ ಕರೊನಾ ವಾರಿಯರ್ಸ್ ಪಡೆ ಮತ್ತು ರೈತರಿಗೆ ಮಾತ್ರ ಮಾಹಿತಿ ಪಡೆದು ಪೆಟ್ರೋಲ್ ಡೀಸೆಲ್ ಹಾಕಲಾಗುತ್ತಿದೆ. ಚೆಕ್​ಪೋಸ್ಟ್​ಗಳಲ್ಲಿ ನಿಗಾ ಇಡಲಾಗಿದೆ ಮಮತ್ತು ಪಟ್ಟಣದ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಮೇ 3 ರವರೆಗೆ ಲಾಕ್​ಡೌನ್ ಘೊಷಣೆಯಿದ್ದು ಯಾರೂ ಲಾಕ್​ಡೌನ್ ಮುಗಿದಿದೆ ಎಂಬ ತಪ್ಪು ಮಾಹಿತಿಯಿಂದ ಮನೆಯಿಂದ ಹೊರಗೆ ಸಂಚರಿಸುವುದು, ನಿಯಮಗಳನ್ನು ಮೀರುವುದು ಮಾಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಕರೊನಾ ವೈರಸ್ ನಿರ್ನಾಮಕ್ಕಾಗಿ ಸರ್ಕಾರ ವಿಧಿಸಿರುವ ನಿಯಮಗಳನ್ನು ಪಾಲಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು ಎಲ್ಲರೂ ಪೊಲೀಸರ ಕಾರ್ಯಕ್ಕೆ ಸಹಕರಿಸಿ ಎಂದು ಪಿಎಸ್​ಐ ಶಿವಯೋಗಿ ಲೋಹಾರ ತಿಳಿಸಿದ್ದಾರೆ.