ಜಿಲ್ಲೆ

ಲಾಠಿ ಏಟು ತಿಂದು ಗೂಡು ಸೇರಿದ ಉತ್ತರ ಜನ

ಕಲಬುರಗಿ: ಲಾಕ್ಡೌನ್ ಮತ್ತು ನಿಷೇಧಾಜ್ಞೆ ಉಲ್ಲಂಘಿಸಿ ಉತ್ತರ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದವರಿಗೆ ಪೊಲೀಸರು ಶುಕ್ರವಾರ ಬಿರುಸಿನ ಲಾಠಿ ಏಟಿನ ರುಚಿ ತೋರಿಸಿದ್ದಾರೆ. ಗುರುವಾರವೂ ಆ ಪ್ರದೇಶಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆದರೂ ಕ್ಯಾರೆ ಎನ್ನದೆ ಓಡಾಡಿಕೊಂಡಿದ್ದವರಿಗೆ ಮತ್ತೆ ಬೆತ್ತದ ರುಚಿ ತೋರಿಸಲಾಯಿತು.
ರೋಜಾ, ದರ್ಗಾ , ನಯಾ ಮೊಹಲ್ಲಾ, ಮುಸ್ಲಿಂ ಚೌಕ್, ಯಾದುಲ್ಲಾ ಕಾಲನಿ, ಇಸ್ಲಾಮಾಬಾದ್ ಕಾಲನಿ, ಮಿಜಗುರಿ, ಚೋಟಾ ಬಾವುಡಿ ಇತರ ಪ್ರದೇಶಗಳಲ್ಲಿ ಇನ್ಸ್ಪೆಕ್ಟರ್ಗಳಾದ ಅಸ್ಲಂ ಬಾಷಾ, ಶಕೀಲ್ ಅಂಗಡಿ, ಅರುಣಕುಮಾರ, ಎಲ್.ಎಚ್. ಗೌಂಡಿ, ಪಂಡಿತ ಸಗರ ಮೊದಲಾದವರು ದಿನವಿಡೀ ಸಂಚಾರ ನಡೆಸುವ ಮೂಲಕ ಅನಗತ್ಯವಾಗಿ ಓಡಾಡಿಕೊಂಡಿದ್ದವರ ಮೇಲೆ ಲಾಠಿ ಬೀಸಿದ್ದು, ಬಿಸಿ ಬಿಸಿ ಕಜ್ಜಾಯ ತಿಂದು ಮನೆ ಸೇರಿಕೊಂಡಿದ್ದಾರೆ.
ಪೊಲೀಸರು ಸೂಪರ್ ಮಾರ್ಕೆಟ್, ಚೌಕ್, ಜಗತ್, ಎಸ್ವಿಪಿ ವೃತ್ತ, ಬಸ್ ನಿಲ್ದಾಣ, ಜೇವರ್ಗಿ ರಸ್ತೆ ಹೀಗೆ ಎಲ್ಲೆಡೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ವಾಹನ ಸಂಚಾರ ವಿರಳವಾಗಿದೆ. ಆದರೆ ಉತ್ತರ ಕ್ಷೇತ್ರದ ಕೆಲವೆಡೆ ಅನಗತ್ಯ ಸಂಚಾರ ಮುಂದುವರಿದಿದ್ದರಿಂದ ಈಗ ಬಿಸಿ ಮುಟ್ಟಿಸಲಾಗಿದೆ.
ಕರೊನಾಕ್ಕೆ ಎರಡನೇ ಬಲಿ ಆಗುತ್ತಿದ್ದಂತೆ ಜನರು ಕೊಂಚ ಗಲಿಬಿಲಿಗೊಂಡಿದ್ದು, ಅದರಲ್ಲೂ ಆತ ಬಾಳೆಹಣ್ಣಿನ ವ್ಯಾಪಾರಿ ಎಂಬುದನ್ನು ಕೇಳಿ ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಗಂಗಾನಗರ, ಹಮಾಲರ ಗಲ್ಲಿ, ಸ್ಟೇಷನ್ ಏರಿಯಾ, ಗಾಂಧಿ ನಗರ, ರೇವಣಸಿದ್ದೇಶ್ವರ ಕಾಲನಿ ಮೊದಲಾದ ಕಡೆ ಜನರು ತಮ್ಮ ತಮ್ಮ ಸರಹದ್ದಿನಲ್ಲಿ ಕಲ್ಲು-ಕಂಟಿಗಳನ್ನು ಇಟ್ಟು ರೋಡ್ ಬಂದ್ ಮಾಡಿ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ.
ಸಂತ್ರಾಸವಾಡಿಯಲ್ಲಿ ಟಾಂಗಾಗಳನ್ನು ರಸ್ತೆ ಮಧ್ಯೆ ಅಡ್ಡಹಾಕಿ ಸಂಚಾರ ಬಂದ್ ಮಾಡಲಾಗಿದೆ. ಉದಯನಗರ ಉದ್ಯಾನವನ ರಸ್ತೆಯಲ್ಲಿ ಬಾಟಲಿಗಳ ಗಾಜುಗಳನ್ನು ಒಡೆದುಹಾಕಿ ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ.

ಲಾಕ್ಡೌನ್ ನಿಯಮ ಉಲ್ಲಂಘಿಸುವ ಮತ್ತು ಉಡಾಫೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಜನರು ನಿಯಮ ಪಾಲನೆ ಮಾಡಬೇಕು. ಇಲ್ಲವಾದರೆ ಶಿಕ್ಷೆ ತಪ್ಪಿದ್ದಲ್ಲ ಎಂಬುದನ್ನು ಅರಿತು ಜಿಲ್ಲಾಡಳಿತಕ್ಕೆ ಸಹಕರಿಸಬೇಕು.
| ಎನ್.ಸತೀಶಕುಮಾರ್ ನಗರ ಪೊಲೀಸ್ ಆಯುಕ್ತ