ಜಿಲ್ಲೆ

ಲಾಕ್‌ಡೌನ್‌ನಲ್ಲಿ ಪೊಲೀಸರ ಮಾನವೀಯತೆ, 55 ದಿನ ನಿರ್ಗತಿಕರಿಗೆ ಮಧ್ಯಾಹ್ನದ ಊಟ ವಿತರಣೆ, ವ್ಯವಸ್ಥೆ ನಿರ್ವಹಣೆಯಲ್ಲಿ ಖಾಕಿ ಸಕ್ಸಸ್

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ

ಕರೊನಾ ಸೋಂಕು ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್ ವಿಧಿಸಲಾಗಿದ್ದು, ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯ ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತಾಗಿತ್ತು. ಅಗತ್ಯವಸ್ತುಗಳ ಕೊರತೆಯಿಂದ ಜನಸಾಮಾನ್ಯರು ಒಂದು ಕಡೆ ಪರದಾಡುವಂತಾಗಿದ್ದರೆ ಮತ್ತೊಂದು ಕಡೆಗೆ ಕರೊನಾ ಸೋಂಕಿತರನ್ನು ಹೊರತುಪಡಿಸಿ ಸಾಮಾನ್ಯ ರೋಗಿಗಳು ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು ಚಿಕಿತ್ಸೆ ಸಿಗದೆ ಕಂಗಾಲಾಗುವಂತಾಗಿತ್ತು. ಇಂಥ ಪರಿಸ್ಥಿತಿಯಲ್ಲೂ ದೊಡ್ಡಬಳ್ಳಾಪುರ ಉಪ ವಿಭಾಗ ಪೊಲೀಸರು ಮಾನವೀಯತೆ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿವಿಧೆಡೆ ಊಟದ ವ್ಯವಸ್ಥೆ: ಸರ್ಕಾರ ಲಾಕ್‌ಡೌನ್ ೋಷಿಸಿದ ದಿನದಿಂದಲೇ ನಗರದ ಡಿ. ಕ್ರಾಸ್ ವೃತ್ತ, ಪ್ರವಾಸಿ ಮಂದಿರ, ಹಳೇ ಬಸ್ ನಿಲ್ದಾಣ, ಕೋಂಗಾಡಿಯಪ್ಪ ಕಾಲೇಜು ರಸ್ತೆ, ದೇವಾಲಯಗಳು ಸೇರಿ ಎಲ್ಲೆಂದರಲ್ಲಿ ಇದ್ದ ಭಿಕ್ಷುಕರು, ನಿರ್ಗತಿಕರ ಬಳಿಗೆ ಹೋಗಿ ಮಧ್ಯಾಹ್ನದ ಊಟದ ಪೊಟ್ಟಣಗಳನ್ನು ಪೊಲೀಸರು ತಲುಪಿಸಿದರು. ಏಪ್ರಿಲ್‌ನಲ್ಲಿ ಆರಂಭವಾದ ಸಮುದಾಯ ಭೋಜನಾಲಯ ಕೆಲಸ ನಿರಂತರವಾಗಿ 55 ದಿನಗಳವರೆಗೆ ಕಾರ್ಯನಿರ್ವಹಿಸಿತು. ಅಲ್ಲದೆ ಗುಡಿಸಲು ನಿವಾಸಿಗಳು, ವಲಸೆ ಕಾರ್ಮಿಕರನ್ನು ಗುರುತಿಸಿ ಅವರಿದ್ದಲ್ಲಿಗೆ ಕನಿಷ್ಠ 1 ತಿಂಗಳಿಗಾಗುವಷ್ಟು ದಿನಸಿಕಿಟ್‌ಗಳನ್ನು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ವಿತರಿಸಿದರು. ಊಟ ಸಿಗದಿದ್ದವರು ಠಾಣೆಗೆ ಬಂದಾಗ ಊಟದ ಪೊಟ್ಟಣ ಕೊಡುತ್ತಿದ್ದರು.

ಆಕ್ಸಿಜನ್ ಕಾನ್ಸನ್‌ಟ್ರೇಟರ್ ವಿತರಣೆ: ತಾಲೂಕಿನಲ್ಲಿ ಆಕ್ಸಿಜನ್ ಸಮಸ್ಯೆ ತಲೆದೋರಿದಾಗ ಡಿವೈಎಸ್‌ಪಿ ಟಿ. ರಂಗಪ್ಪ ನೇತೃತ್ವದಲ್ಲಿ ಪೊಲೀಸ್ ಪಡೆ ಶ್ರಮವಹಿಸಿ ತಾಲೂಕು ಆಡಳಿತದ ಸಹಕಾರದೊಂದಿಗೆ ಖಾಸಗಿ ಆಕ್ಸಿಜನ್ ಕಂಪನಿ ಜತೆ ಮಾತನಾಡಿ ಸಾರ್ವಜನಿಕ ಆಸ್ಪತ್ರೆಗೆ ನಿತ್ಯ ಆಕ್ಸಿಜನ್ ಪೂರೈಕೆ ಆಗುವಂತೆ ಮಾಡಿದರು. ಅಲ್ಲದೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೋವಿಡ್ ಕೇಂದ್ರಗಳಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಪೂರೈಸಿ ಹಲವು ಜೀವಗಳನ್ನು ರಕ್ಷಿಸಿದರು. ಸಾರ್ವಜನಿಕ ಆಸ್ಪತ್ರೆಯ ಸುರಕ್ಷತೆಗಾಗಿ ಡಿಆರ್ ಸಿಬ್ಬಂದಿಯನ್ನು ನಿಯೋಜಿಸಿ, ಸಮಸ್ಯೆಯಾಗದಂತೆ ನೋಡಿಕೊಳ್ಳಲಾಯಿತು.

ಕಣ್ಣೀರಲ್ಲಿ ಕೈತೊಳೆದ ಖಾಕಿ ಪಡೆ: ನಗರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಬ್ ಇನ್‌ಸ್ಪೆಕ್ಟರ್ ಕೆ. ವೆಂಕಟೇಶ್ ಅವರ ಹಿರಿಯ ಪುತ್ರ ಸೇರಿ ಕುಟುಂಬ ಸದಸ್ಯರಾದ ಮಾವ, ಅತ್ತೆ, ಭಾವ ಸಾವಿನ ಸಂಗತಿ ಹಾಗೂ ದೊಡ್ಡಬಳ್ಳಾಪುರ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಕಾವೇರಪ್ಪ ಅವರ ನಿಧನದಿಂದ ಇಡೀ ಪೊಲೀಸ್ ಇಲಾಖೆ ಕಣ್ಣೀರಿನಲ್ಲಿ ಕೈತೊಳೆಯುವಂತಾಯಿತು.

ಸಾರ್ವಜನಿಕರ ಸಹಕಾರ: ತಾಲೂಕಿನಲ್ಲಿ ಶರವೇಗದಲ್ಲಿ ಹಬ್ಬುತ್ತಿದ್ದ ಕರೊನಾ ಸೋಂಕಿನ ನಿಯಂತ್ರಣಕ್ಕೆ ತಾಲೂಕು ಆಡಳಿತ ಟೊಂಕ ಕಟ್ಟಿ ನಿಂತರೆ ಅವರ ಬೆನ್ನಿಗೆ ಪೊಲೀಸ್ ಇಲಾಖೆ ಅಷ್ಟೇ ಗಟ್ಟಿಯಾಗಿ ನಿಂತಿತು. ತಾಲೂಕಿನ ಎಲ್ಲ ಗಡಿಗಳನ್ನು ಬಂದ್ ಮಾಡಿ ನಗರದ ಬೀದಿಬೀದಿಯಲ್ಲಿ ಅರಿವು ಮೂಡಿಸಿದರು. ಈ ಕಾರ್ಯದಲ್ಲಿ ಪೊಲೀಸರಿಗೆ ಅನೇಕ ಸಂಘ-ಸಂಸ್ಥೆಗಳು ಕೈ ಜೋಡಿಸಿದ್ದು ವಿಶೇಷವಾಗಿತ್ತು.

ಹಳೇ ಕಡತಗಳ ವಿಲೇವಾರಿ: ಲಾಕ್‌ಡೌನ್‌ನಿಂದಾಗಿ ಅಪರಾಧ ಪ್ರಕರಣಗಳು, ಠಾಣೆಯ ದೂರುಗಳ ಸಂಖ್ಯೆ ಕಡಿಮೆಯಾಗಿದ್ದವು. ಇದರಿಂದಾಗಿ ದೊಡ್ಡಬಳ್ಳಾಪುರ ಉಪ ವಿಭಾಗದಲ್ಲಿನ ಠಾಣೆಗಳಲ್ಲಿ ಹಲವು ವರ್ಷಗಳಿಂದ ಬಗೆಹರಿಯದೆ ಇದ್ದ ಕಡತಗಳ ವಿಲೇವಾರಿ, ಪರಿಶೀಲನೆ ಮಾಡಲಾಯಿತು. ಇದೇ ಸಮಯದಲ್ಲಿ ಹಲವು ಠಾಣೆಗಳು ಸುಣ್ಣ ಬಣ್ಣ ಕಂಡವು.

ಕರೊನಾ ಮೊದಲ ಅಲೆಯ ವೇಳೆ ಜನರು ಊಟಕ್ಕಾಗಿ ಪರದಾಡಿದ್ದ ದೃಶ್ಯ ಕಣ್ಮುಂದೆ ಇತ್ತು. ಈ ಬಾರಿ ನಿರ್ಗತಿಕರು, ಭಿಕ್ಷುಕರು ಯಾರೂ ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕೆ ಸಮುದಾಯ ಭೋಜನಾಲಯ ತೆರೆದು ಪ್ರತಿನಿತ್ಯ ಮಧ್ಯಾಹ್ನ ಊಟ ಹಂಚಲಾಯಿತು. ಆಕ್ಸಿಜನ್ ಸಮಸ್ಯೆ ಕೇಳಿಬಂದಾಗ ಸ್ಥಳೀಯ ಆಡಳಿತಕಕ್ಕೆ ಹೆಚ್ಚಿನ ನೆರವು ನೀಡಲಾಯಿತು. ಟಿ. ರಂಗಪ್ಪ, ದೊಡ್ಡಬಳ್ಳಾಪುರ ಉಪವಿಭಾಗ ಡಿವೈಎಸ್‌ಪಿ ನಮ್ಮ ಸಿಬ್ಬಂದಿ ಶಕ್ತಿಮೀರಿ ಕೆಲಸ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಊಟದ ವ್ಯವಸ್ಥೆ ಮಾಡಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದ ತೃಪ್ತಿ ನಮಗಿದೆ. ಎಂ.ಬಿ. ನವೀನ್ ಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್