ಬೆಳಗಾವಿಯ ರವಿವಾರ ಪೇಟೆ ಮಾರುಕಟ್ಟೆಗಳಲ್ಲಿ ಸೋಮವಾರ ಕಂಡುಬಂದ ಜನ ಜಂಗುಳಿ. 
ಜಿಲ್ಲೆ

ಲಾಕ್‌ಡೌನ್ ನಿಯಮ ಮರೆತ ಜನ

ಬೆಳಗಾವಿ: ಕರೊನಾ 2ನೇ ಅಲೆ ತಂದ ಭೀಕರತೆ ನಡುವೆಯೂ ಜನರು ಮೈಮರೆತು ಮಾರುಕಟ್ಟೆ, ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದು, ಸೋಂಕು ಹರಡುವ ಆತಂಕ ಮತ್ತಷ್ಟು ಹೆಚ್ಚಿದೆ. ಜಿಲ್ಲೆಯಲ್ಲಿ ಲಾಕ್‌ಡೌನ್ ವಿಸ್ತರಣೆಗೊಂಡಿದ್ದರೂ ಬೆಳಗಾವಿ ನಗರದಲ್ಲಿ ಅನ್‌ಲಾಕ್ ಪರಿಸ್ಥಿತಿ ನಿರ್ಮಾಣವಾಗಿದೆ.

ಕರೊನಾ ದೈನಿಕ ಪ್ರಕರಣ ಹಾಗೂ ಪಾಸಿಟಿವಿಟಿ ದರ ಇಳಿಮುಖವಾಗುತ್ತಿರುವ 20 ಜಿಲ್ಲೆಗಳಿಗೆ ಮಾತ್ರ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಅನ್‌ಲಾಕ್ ೋಷಿಸಿದೆ. ಬೆಳಗಾವಿ ಸೇರಿದಂತೆ ಇನ್ನಿತರ 11 ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿಯಮ ಕಠಿಣ ಕ್ರಮ ಮುಂದುವರಿಸಲು ಆದೇಶಿಸಿದೆ. ಆದರೆ, ಬೆಳಗಾವಿ ನಗರದಲ್ಲಿ ಸಾಮಾನ್ಯ ದಿನಗಳಂತೆ ವಾಹನ ಸಂಚಾರ, ವ್ಯಾಪಾರ ವಹಿವಾಟು, ಜನರ ಸಂಚಾರ ಕಂಡುಬರುತ್ತಿದೆ. ಸ್ಥಳೀಯ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಸಂಚಾರ ದಟ್ಟಣೆ: ಕರೊನಾ ಪ್ರಕರಣಗಳ ಸಂಖ್ಯೆ ಹಾಗೂ ಪಾಸಿಟಿವಿಟಿ ದರ ಶೇ. 9.5ರಷ್ಟಿರುವ ಹಿನ್ನೆಲೆಯಲ್ಲಿ ಸರ್ಕಾರವು ಜೂ. 21ರ ವರೆಗೆ ಜಿಲ್ಲೆಯಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಆದರೆ, ವಿವಿಧ ಇಲಾಖೆ ಅಧಿಕಾರಿಗಳು, ಪೊಲೀಸರು ಮತ್ತು ಸಾರ್ವಜನಿಕರು ಬೆಳಗಾವಿ ಜಿಲ್ಲೆಯೂ ಅನ್‌ಲಾಕ್ ಎಂಬ ಭ್ರಮೆಯಲ್ಲಿದ್ದಂತೆ ಗೋಚರಿಸುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಸೋಮವಾರ ಬೆಳಗ್ಗೆಯಿಂದಲೇ ಕೋಟೆ ಕೆರೆ, ಚನ್ನಮ್ಮ ವೃತ್ತ, ಹಳೇಪಿಬಿ ರಸ್ತೆ, ಕಾಲೇಜ್ ರಸ್ತೆ, ಗಾಂಧಿ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ವಾಹನ ಸಂಚಾರ ದಟ್ಟಣೆ ಇತ್ತು. ಅಲ್ಲದೆ ಸಗಟು, ಚಿಲ್ಲರೆ ಮಾರುಕಟ್ಟೆಗಳಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳದೆ ಜನರು ಮುಗಿಬಿದ್ದು ಅಗತ್ಯ ವಸ್ತು ಖರೀದಿಸುತ್ತಿರುವುದು ಸಾಮಾನ್ಯವಾಗಿತ್ತು.

ಜಾಲತಾಣದಲ್ಲಿ ತಪ್ಪು ಸಂದೇಶ: ಬೆಳಗಾವಿ ಜಿಲ್ಲೆ ಸೋಮವಾರ ಅನ್‌ಲಾಕ್ ಆಗಿದ್ದು, ಜನರು ಎಂದಿನಂತೆ ಓಡಾಡಬಹುದು, ವ್ಯಾಪಾರ ವಹಿವಾಟ ನಡೆಸಲು ಯಾವುದೇ ನಿರ್ಬಂಧ ಇಲ್ಲ ಎಂಬ ತಪ್ಪು ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದರಿಂದ ಜನರು ಮನೆಬಿಟ್ಟು ಹೊರಗಡೆ ಬಂದಿದ್ದಾರೆ. ಆದರೆ, ಅಧಿಕಾರಿಗಳು ಕೂಡ ಕೆಲವು ಮಾರ್ಗಗಳಲ್ಲಿ ಬ್ಯಾರಿಕೇಡ್ ತೆಗೆದು ವಾಹನ ಸಂಚಾರಕ್ಕೆ ಅವಕಾಶ ಕಲಿಸಿದ್ದರು. ಇದರಿಂದಲೇ ಇಷ್ಟೆಲ್ಲ ಸಮಸ್ಯೆ ಉಂಟಾಗಿದೆ. ಜಿಲ್ಲಾಡಳಿತ, ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗಣಪತಿ ಗಲ್ಲಿಯ ಶಿವಾಜಿ ಹಲಗೇಕರ್, ರಾಹುಲ್ ಪಾಟೀಲ, ಎಸ್.ಅಪ್ಪಾಸಾಹೇಬ ಇತರರು ಆಗ್ರಹಿಸಿದ್ದಾರೆ.

ಮೆಣಸಿನಕಾಯಿ ಬೀಜಕ್ಕಾಗಿ ಪರದಾಟ

ಮುಂಗಾರು ಹಂಗಾಮಿನಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ವಿವಿಧ ಬೆಳೆಗಳ ನಾಟಿ ಮಾಡುತ್ತಿದ್ದಾರೆ. ಈ ನಡುವೆ ಬೆಳಗಾವಿ, ಖಾನಾಪುರ, ಕಿತ್ತೂರ, ಬೈಲಹೊಂಗಲ ತಾಲೂಕಿನ ಕೆಲ ಗ್ರಾಮಗಳಲ್ಲಿನ ರೈತರು ಮೆಣಸಿನಕಾಯಿ ಬಿತ್ತನೆ ಬೀಜಕ್ಕಾಗಿ ಸೋಮವಾರ ಅಲೆದಾಡಿದರು. ಸಗಟು ಮಾರುಕಟ್ಟೆ, ಅಂಗಡಿಗಳಲ್ಲಿ ಬಿತ್ತನೆ ಬೀಜ ಸಿಗುತ್ತಿಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸಮರ್ಪಕವಾಗಿ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ರೈತರಾದ ಪಾಪು ಪಾಟೀಲ, ರಮೇಶ ಲಮಾಣಿ ಒತ್ತಾಯಿಸಿದರು.