ಜಿಲ್ಲೆ

ಲಾಕ್​ಡೌನ್​ನಲ್ಲಿ ಹೆಚ್ಚಿತು ಶಾಲೆಯ ಸೌಂದರ್ಯ

ಸುಭಾಸ ಹೆಗಡೆ ಧೂಪದಹೊಂಡ

ಶ್ರೀಧರ ಅಣಲಗಾರ ಯಲ್ಲಾಪುರ

ಲಾಕ್​ಡೌನ್​ನಿಂದಾಗಿ ಶಾಲೆಗಳು ಕಾರ್ಯನಿರ್ವಹಿಸದೇ ಎರಡು ತಿಂಗಳು ಕಳೆದಿವೆ. ಈ ಅವಧಿಯಲ್ಲಿ ಬಹುತೇಕ ಶಿಕ್ಷಕರು ಮನೆಯಲ್ಲಿದ್ದರೆ, ತಾಲೂಕಿನ ಗೋಳಿಗದ್ದೆ ಸ.ಕಿ.ಪ್ರಾ ಶಾಲೆಯ ಶಿಕ್ಷಕರು ಮಾತ್ರ ಕ್ರಿಯಾಶೀಲತೆಯ ಮೂಲಕ ಶಾಲೆಯ ಪರಿಸರಕ್ಕೆ ಹೊಸ ರೂಪವನ್ನೇ ನೀಡಿದ್ದಾರೆ.

ಶಿಕ್ಷಕರ ಕಾಳಜಿ, ಹಳೆಯ ವಿದ್ಯಾರ್ಥಿಯ ಪ್ರತಿಭೆಯಿಂದಾಗಿ ಲಾಕ್​ಡೌನ್ ಸಂದರ್ಭದಲ್ಲಿ ಶಾಲೆಯ ಪರಿಸರದ ಸೌಂದರ್ಯವು ಹೆಚ್ಚಾಗಿದೆ.

ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಗೋಳಿಗದ್ದೆ ಶಾಲೆಯ ಹಳೆಯ ವಿದ್ಯಾರ್ಥಿ, ಚಿತ್ರ ಕಲಾವಿದ ಹರ್ಷ ಗಾಂವ್ಕಾರ ಅವರು ಲಾಕ್​ಡೌನ್ ವೇಳೆ ಊರಿಗೆ ಬಂದಿದ್ದು, ತಮ್ಮ ಸಮಯವನ್ನು ಶಾಲೆಯ ಆವರಣ ಸುಂದರಗೊಳಿಸಲು ಸದುಪಯೋಗಪಡಿಸಿಕೊಂಡಿದ್ದಾರೆ.

ಸದಾ ಉತ್ತಮ ಚಟುವಟಿಕೆಗಳ ಮೂಲಕ ತಾಲೂಕಿನಲ್ಲಿ ಉತ್ತಮ ಹೆಸರು ಹೊಂದಿರುವ ಗೋಳಿಗದ್ದೆ ಶಾಲೆಯ ಆವರಣದ ಗೋಡೆಯಲ್ಲಿ ಆಕರ್ಷಕ ಚಿತ್ರಗಳನ್ನು ರಚಿಸಬೇಕು. ಶಾಲಾ ಆವಾರದಲ್ಲಿ ಚಿಟ್ಟೆ ಪಾರ್ಕ್ ನಿರ್ವಿುಸಬೇಕು ಎಂಬ ಉದ್ದೇಶ ಶಿಕ್ಷಕ ಶ್ರೀಧರ ಮಡಿವಾಳ ಅವರದ್ದಾಗಿತ್ತು. ಲಾಕ್​ಡೌನ್ ಸಮಯದಲ್ಲಿ ಇದು ಈಡೇರಿದೆ.

ಹರ್ಷ ಗಾಂವ್ಕಾರ ಅವರು ತಮ್ಮ ಕುಂಚದ ಮೂಲಕ ಶಾಲಾ ಆವರಣ ಗೋಡೆಯ ಮೇಲೆ ಪರಿಸರ, ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಆಕರ್ಷಕವಾಗಿ ಬಿಡಿಸಿದ್ದಾರೆ. ಕಾಡಿನ ನಡುವೆ ಇರುವ ಶಾಲೆಯ ಆವರಣ ಗೋಡೆಯಲ್ಲೂ ಕಾಡಿನ ಹಸಿರು ಕಂಗೊಳಿಸುತ್ತಿದೆ. ಇನ್ನೊಂದೆಡೆ ಶಾಲಾ ಆವಾರದಲ್ಲಿ ಶಿಕ್ಷಕರ ಶ್ರಮದಿಂದ ಚಿಟ್ಟೆ ಪಾರ್ಕ್ ನಿರ್ವಣವಾಗಿದೆ. ಪ್ರತಿನಿತ್ಯ ನೂರಾರು ಚಿಟ್ಟೆಗಳು ಬಂದು ಈ ಚಿಟ್ಟೆ ಪಾರ್ಕ್​ನಲ್ಲಿ ವಿಹರಿಸುತ್ತಿರುವ ದೃಶ್ಯ ಮನ ಸೆಳೆಯುವಂತಿದೆ.

ಲಾಕ್​ಡೌನ್, ಬೇಸಿಗೆ ರಜೆಯನ್ನು ಮುಗಿಸಿ ಶಾಲೆಯ ಕಡೆ ಬರುವ ವಿದ್ಯಾರ್ಥಿಗಳನ್ನು ಈ ಮೂಲಕ ವಿಶಿಷ್ಟವಾಗಿ ಸ್ವಾಗತಿಸಲು ಶಾಲೆ ಸಜ್ಜುಗೊಂಡಿದೆ. ಲಾಕ್​ಡೌನ್ ವೇಳೆ ಶಾಲೆ ಹಳೇ ವಿದ್ಯಾರ್ಥಿಯಿಂದ ಹೊಸ ರೂಪ ಪಡೆದುಕೊಂಡ ಬಗೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಲಾಕ್​ಡೌನ್ ವೇಳೆ ಸಮಯ ಕಳೆಯುವುದು ಹೇಗೆಂಬ ಪ್ರಶ್ನೆ ಇತ್ತು. ಇದಕ್ಕೆ ಪೂರಕವಾಗಿ ಶಿಕ್ಷಕರ ಸಲಹೆ ಈ ಕಾರ್ಯಕ್ಕೆ ನನ್ನನ್ನು ಪ್ರೇರೇಪಿಸಿತು. ಈ ಸಮಯದಲ್ಲಿ ಕಲಿತ ಶಾಲೆಗೆ ಸೇವೆ ಸಲ್ಲಿಸುವ ಸದಾವಕಾಶ ಒದಗಿ ಬಂದಿರುವುದು ಸಂತಸ ತಂದಿದೆ. | ಹರ್ಷ ಗಾಂವ್ಕಾರ, ಹಳೇ ವಿದ್ಯಾರ್ಥಿ
ಲಾಕ್​ಡೌನ್ ಸಮಯವನ್ನು ಮನೆಯಲ್ಲಿ ಮೋಜು, ಮಸ್ತಿ ಮಾಡುತ್ತ ಕಳೆಯದೇ ಸದುಪಯೋಗಪಡಿಸಿಕೊಂಡ ಹರ್ಷ ಮತ್ತು ಶಿಕ್ಷಕರ ಕಾರ್ಯ ಮಾದರಿಯಾಗಿದೆ. | ರಾಮನಾಥ ಹೆಗಡೆ, ಎಸ್​ಡಿಎಂಸಿ ಅಧ್ಯಕ್ಷ