ಜಿಲ್ಲೆ

ಲಾಕ್​ಡೌನ್​ನಲ್ಲಿ ನಾಳೆಯಿಂದ ವಿನಾಯಿತಿ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಇಳಿಮುಖ ಆಗುತ್ತಿರುವುದರಿಂದ ಜೂ. 7 ರಿಂದ ಲಾಕ್​ಡೌನ್ ನಿಯಮಗಳಲ್ಲಿ ಅಲ್ಪ ವಿನಾಯಿತಿ ನೀಡಲು ನಗರದ ರ್ಸಟ್​ಹೌಸ್​ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ತೀರ್ವನಿಸಲಾಯಿತು.
ಸದ್ಯ ಹಾಲು, ತರಕಾರಿ ಸೇವೆಗಳಿಗೆ ಮಾತ್ರ ಬೆಳಗ್ಗೆ 6ರಿಂದ 8ಗಂಟೆವರೆಗೆ ಅವಕಾಶವಿದೆ. ಈ ಸಮಯವನ್ನು ಬೆಳಗ್ಗೆ 10 ಗಂಟೆಯವರೆಗೆ ವಿಸ್ತರಿಸಿ ಹಾಲು, ತರಕಾರಿ, ಕಿರಾಣಿ ಅಂಗಡಿ, ಹೋಟೆಲ್ ಹಾಗೂ ಮದ್ಯ ಅಂಗಡಿಗಳಲ್ಲಿ ಪಾರ್ಸಲ್ ಸೇವೆಗೆ ಅವಕಾಶ ನೀಡಲು, ಹೋಟೆಲ್​ಗಳ ಮೂಲಕ ಹೋಂ ಡೆಲಿವರಿಗೆ ರಾತ್ರಿ 8ರವರೆಗೆ ಸಮಯಾವಕಾಶ ನೀಡುವಂತೆ ಸಚಿವ ಜಗದೀಶ ಶೆಟ್ಟರ್ ಸೂಚಿಸಿದರು.
ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಲಸಿಕೆ ಕಾರ್ಯ ಚುರುಕು ಗೊಳಿಸಲು, ಆದ್ಯತೆ ಮತ್ತು ದುರ್ಬಲ ವರ್ಗದವರಿಗೆ ಕಡ್ಡಾಯವಾಗಿ ಲಸಿಕೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಹಣ್ಣು ಬೆಳೆಗಾರರಿಗೆ 1,08,64,487 ರೂ. ಹಾಗೂ ತರಕಾರಿ ಬೆಳಗಾರರಿಗೆ 55,400 ರೂ. ಬಿಡುಗಡೆಯಾಗಿದೆ. ಹೂವು ಬೆಳೆಗಾರರಿಗೆ 10,73,529 ರೂ. ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ ನೀಡಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪೊಲೀಸ್ ಆಯುಕ್ತ ಲಾಭೂರಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ಸುಶೀಲ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ ಇತರರಿದ್ದರು.
247 ಪ್ರಕರಣ: ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಶನಿವಾರ 247 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 8 ಜನ ಮೃತಪಟ್ಟಿದ್ದಾರೆ. 633 ಜನ ಬಿಡುಗಡೆಯಾಗಿದ್ದು, 3571 ಸಕ್ರಿಯ ಪ್ರಕರಣಗಳಿವೆ. ಕೋವಿಡ್​ನಿಂದ ಇದುವರೆಗೆ 999 ಜನ ಮೃತಪಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಹೆಚ್ಚಿದ ಜನದಟ್ಟಣೆ
ಹುಬ್ಬಳ್ಳಿ: ಲಾಕ್​ಡೌನ್ ಮಧ್ಯೆಯೂ ನಗರದಲ್ಲಿ ಶನಿವಾರ ವಾಹನ ಹಾಗೂ ಜನದಟ್ಟಣೆ ಹೆಚ್ಚಿದ್ದು, ಕೋವಿಡ್ ನಿಯಮಗಳ ಪಾಲನೆ ಗಾಳಿಗೆ ತೂರಿದಂತಿತ್ತು. ಬೆಳಗ್ಗೆಯಿಂದಲೇ ಆಟೋ, ಬೈಕ್, ಕಾರುಗಳು ಸಂಚರಿಸುತ್ತಿದ್ದವು. ಪಾದಚಾರಿಗಳೂ ಗುಂಪಾಗಿ ತಿರುಗಾಡುತ್ತಿದ್ದರು. ಚನ್ನಮ್ಮ ವೃತ್ತ ಸೇರಿ ಕೆಲವೆಡೆ ಮಾತ್ರ ಪೊಲೀಸರು ವಾಹನಗಳನ್ನು ತಡೆದು ವಿಚಾರಿಸುತ್ತಿದ್ದರು. ಸವೋದಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸ್ಟೇಷನ್ ರಸ್ತೆ, ವಿದ್ಯಾನಗರ, ಗೋಕುಲ ರಸ್ತೆ, ಹಳೇ ಹುಬ್ಬಳ್ಳಿ ಸೇರಿ ಬಹುತೇಕ ವೃತ್ತ ಹಾಗೂ ಮುಖ್ಯರಸ್ತೆಗಳಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆಯುವ ಗೊಡವೆಗೆ ಪೊಲೀಸರು ಹೋಗಲಿಲ್ಲ.
ಕೇಶ್ವಾಪುರ, ಜನತಾ ಬಜಾರ, ಸಿದ್ಧೇಶ್ವರ ಪಾರ್ಕ್ ಸೇರಿ ವಿವಿಧೆಡೆ ಬೆಳಗ್ಗೆಯಿಂದಲೇ ಜನ ಗುಂಪಾಗಿ ತರಕಾರಿ ಖರೀದಿಯಲ್ಲಿ ನಿರತರಾಗಿದ್ದರು. ಬೆಳಗ್ಗೆ 8ರವರೆಗೆ ತರಕಾರಿ ಖರೀದಿ ಸಮಯದಲ್ಲಿ ಕಂಡುಬಂದ ಜನದಟ್ಟಣೆ ಮಧ್ಯಾಹ್ನ 12 ಗಂಟೆಯವರೆಗೂ ಮುಂದುವರಿದಿತ್ತು. ಮಧ್ಯಾಹ್ನ 2 ಗಂಟೆ ನಂತರ ವಾಹನಗಳ ಸಂಚಾರ ಕಡಿಮೆ ಇತ್ತಾದರೂ, ಸಂಜೆ 6 ಗಂಟೆಯ ನಂತರ ವಾಹನಗಳು ಮತ್ತೆ ರಸ್ತೆಗೆ ಇಳಿದಿದ್ದವು. ಮಾಸ್ಕ್ ಧರಿಸದೆ ತಿರುಗುತ್ತಿದ್ದವರಿಗೆ ಪೊಲೀಸರು ಮಾಸ್ಕ್ ವಿತರಿಸಿದರು.