ಹುಬ್ಬಳ್ಳಿ: ಮರ ಕಡಿದ ಮೇಲೆ ನೆರಳಿನ ಮಹತ್ವ ಗೊತ್ತಾಯಿತು ಎಂಬಂತೆ ಲಾಕ್ಡೌನ್ ಸಡಿಲಿಸಿದ ನಂತರದ ದಿನಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕು ವ್ಯಾಪಿಸುತ್ತಿದೆ. ಲಾಕ್ಡೌನ್ನ ಮಹತ್ವ ಎಲ್ಲರಿಗೂ ಅರ್ಥವಾಗುತ್ತಿದ್ದು, ಮತ್ತೊಮ್ಮೆ ಘೊಷಣೆಯಾಗಲಿ ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ. ಆದರೆ, ಮತ್ತೊಮ್ಮೆ ಲಾಕ್ಡೌನ್ ಜಾರಿಗೆ ಸರ್ಕಾರವೇ ಹಿಂದೇಟು ಹಾಕುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಈ ಮಧ್ಯೆ, ಸರ್ಕಾರ ಮತ್ತೊಮ್ಮೆ ರಾಜ್ಯವ್ಯಾಪಿ ಲಾಕ್ಡೌನ್ ಜಾರಿ ವಿಷಯದಲ್ಲಿ ನಿರ್ಧಾರಕ್ಕೆ ಬಾರದಿದ್ದರೂ ಜಿಲ್ಲೆಯಲ್ಲಿ ಸೀಮಿತವಾಗಿ ಲಾಕ್ಡೌನ್ ಮಾಡುವ ಮೂಲಕ ಕರೊನಾ ಹರಡುವಿಕೆ ಸರಪಳಿಯನ್ನು ತುಂಡರಿಸಲು ನಾಗರಿಕರು ಆಸಕ್ತಿ ತೋರಿಸುತ್ತಿದ್ದಾರೆ. ಸಾರ್ವಜನಿಕ ವಹಿವಾಟಿನ ಸಮಯವನ್ನು ಸಂಕ್ಷಿಪ್ತಗೊಳಿಸುವುದು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಬಹುದು ಎಂಬ ನಿರ್ಧಾರಕ್ಕೆ ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಜವಳಿ ವರ್ತಕರ ಸಂಘ, ಸರಾಫ ಸಂಘ, ವಿವಿಧ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಸಂಘ ಸಂಸ್ಥೆಯವರು ಸಭೆ ಸೇರಿ ರ್ಚಚಿಸಿ ಸಂಜೆ 5ರ ವೇಳೆಗೆಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಮುಸ್ಸಂಜೆ ವೇಳೆಗೂ ಜನರು ಮಾರುಕಟ್ಟೆಗೆ ಬರಲು ಅವಕಾಶವಿದ್ದರೆ, ಖರೀದಿಗೆ ಮತ್ತು ಮನೆಗೆ ವಾಪಸಾಗಲು ಹೆಚ್ಚು ಅವಸರ ಮಾಡಿಕೊಳ್ಳುತ್ತಾರೆ. ಆಗ ಪರಸ್ಪರ ಅಂತರ ನಿರ್ವಹಣೆ ಸೇರಿ ಅಗತ್ಯ ಸುರಕ್ಷಾ ಕ್ರಮಗಳಿಗೆ ಆದ್ಯತೆ ಕಡಿಮೆಯಾಗಿಬಿಡುತ್ತದೆ. ಕಾಣದ ಕರೊನಾ ವೈರಸ್ ಇಂಥ ಸಂದರ್ಭವನ್ನೇ ಕಾಯುತ್ತ ಇರಬಹುದು!
ಹಾಗಾಗಿ, ಜನರು ಮಾರುಕಟ್ಟೆಯಿಂದ ಮೇಲೆ ಮನೆ ತಲುಪಲು ತಡವಾಯಿತು ಎಂದು ಭಾವಿಸಲು ಆಸ್ಪದವಿಲ್ಲದಂತೆ ಸಂಜೆ 5ಕ್ಕೆ ವಹಿವಾಟು ಮುಗಿಸಲು ನಿರ್ಧರಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮೊದಲು ತೆಗೆದುಕೊಂಡ ತೀರ್ವನವನ್ನು ಮೆಚ್ಚಿ, ಧಾರವಾಡದ ವ್ಯಾಪಾರಿಗಳ ಸಂಘದವರೂ ಸಂಜೆ 5ರ ಗಡುವನ್ನು ನಿಗದಿಪಡಿಸಿಕೊಳ್ಳುತ್ತಿದ್ದಾರೆ. ಉಳಿದ ಪಟ್ಟಣದವರೂ ಇದೇ ಚಿಂತನೆಯಲ್ಲಿದ್ದಾರೆ.
ಇದುವರೆಗೆ ರಾತ್ರಿಯಾದ ಮೇಲೆ ಮನೆ ತಲುಪುತ್ತಿದ್ದ ವ್ಯಾಪಾರಿ ವರ್ಗದವರು ಇನ್ನುಮುಂದೆ ಸಂಜೆ 6ರ ವೇಳೆಗೆಲ್ಲ ಮನೆಯಲ್ಲಿರುವುದರಿಂದ ಅವರ ದಿನಚರಿಯಲ್ಲಿಯೂ ಗಣನೀಯವಾದ ಸುಧಾರಣೆಯಾಗಲಿದೆ.
ಸದ್ಯ ರಾತ್ರಿ 8ರ ವೇಳೆಗೆಲ್ಲ ಪೊಲೀಸರು ಸೀಟಿ ಹೊಡೆಯುತ್ತ ಬಂದು ವಹಿವಾಟು ಬಂದ್ ಮಾಡಿಸುತ್ತಿದ್ದಾರೆ. ವ್ಯಾಪಾರಸ್ಥರ ಸಂಘಟನೆಗಳ ಸಕಾರಾತ್ಮಕ ತೀರ್ವನದಿಂದ ಇನ್ನುಮುಂದೆ ಪೊಲೀಸರ ಕೆಲಸ ಸುಲಭವಾಗಲಿದೆ.
ವಹಿವಾಟಿನ ಅವಧಿ ಸಂಕ್ಷಿಪ್ತಗೊಳಿಸಿದರೂ ಜನರು ಬಂದೇ ಬರುತ್ತಾರೆ. ಗುಂಪುಗೂಡುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ಮತ್ತೊಮ್ಮೆ ಪೂರ್ತಿ ಲಾಕ್ಡೌನ್ ಆಗಲಿ ಎಂಬ ಅಭಿಪ್ರಾಯ ಕೇಳಿಬರುತ್ತಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಯಾವ ರೀತಿ ಮನವರಿಕೆ ಮಾಡಿಕೊಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ತೆರಿಗೆ ಮೇಲೆ ಪ್ರೀತಿ?
ಹುಬ್ಬಳ್ಳಿ ಪ್ರಮುಖ ವಾಣಿಜ್ಯ ಕೇಂದ್ರ. ಇಲ್ಲಿಂದ ಸರ್ಕಾರಕ್ಕೆ ನಿತ್ಯವೂ ಕೋಟ್ಯಂತರ ರೂ. ತೆರಿಗೆ ಆದಾಯವಿದೆ. ಹೀಗಾಗಿ, ಬೆಂಗಳೂರಿನಲ್ಲಿ ಲಾಕ್ಡೌನ್ ಜಾರಿ ಮಾಡಿದರೂ ಧಾರವಾಡ ಜಿಲ್ಲೆಯನ್ನು ಪರಿಗಣಿಸಿಲ್ಲವೆ ಎಂಬ ಪ್ರಶ್ನೆ ಉದ್ಭವಿಸಿದೆ.
ಲಾಕ್ಡೌನ್ ಜಾರಿ ಮಾಡಿದರೆ ಸೇವಾ ಕ್ಷೇತ್ರ ಸ್ಥಗಿತಗೊಂಡು ಹಲವರು ಉದ್ಯೋಗಹೀನರಾಗುತ್ತಾರೆ. ಅದರ ಬದಲು ಸುರಕ್ಷತಾ ನಿಯಮಗಳ ಪಾಲನೆ ಕುರಿತು ಜನರಿಗೆ ಹೆಚ್ಚು ಮನವರಿಕೆ ಮಾಡುವುದೇ ಸೂಕ್ತ ಎಂದು ಸರ್ಕಾರ ಭಾವಿಸಿರುವ ಸಾಧ್ಯತೆಯೂ ಇದೆ.
ವ್ಯಾಪಾರ ವಹಿವಾಟು ಅವಧಿ ಮೊಟಕಿಗೆ ನಿರ್ಣಯ
ಧಾರವಾಡ: ನಗರದಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಅಂಗಡಿಗಳನ್ನು ಬೇಗ ಬಂದ್ ಮಾಡುವ ನಿರ್ಣಯ ಕೈಗೊಂಡಿದ್ದಾರೆ.
ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಸಭೆಯಲ್ಲಿ ಕಿರಾಣಿ ವರ್ತಕರ ಸಂಘ, ಬಟ್ಟೆ ವ್ಯಾಪಾರಸ್ಥರ ಸಂಘ, ಗ್ರಾಹಕ ವಸ್ತು ವಿತರಕರ ಸಂಘ, ಗೊಬ್ಬರ ಮತ್ತು ಕ್ರಿಮಿನಾಶಕ ವ್ಯಾಪಾರಸ್ಥರ ಸಂಘ, ಸ್ಟೇಷನರಿ ವ್ಯಾಪಾರಸ್ಥರ ಸಂಘ, ಹೂ ಮತ್ತು ಹಣ್ಣು ವ್ಯಾಪಾರಸ್ಥರ ಸಂಘ, ಕಾಯಿಪಲ್ಲೆ ಠೋಕ ವರ್ತಕರ ಸಂಘ, ಎಲೆ ಅಡಕೆ ಪಾನ್ ಮಸಾಲಾ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಪಾಲ್ಗೊಂಡು ಬೆಂಬಲ ಸೂಚಿಸಿದ್ದಾರೆ.
ಜಿಲ್ಲಾಡಳಿತಕ್ಕೆ ಮನವಿ:
ನಗರದಲ್ಲಿ ಸಂಜೆ ಜನದಟ್ಟಣೆಯಾಗುತ್ತಿರುವುದರಿಂದ ಕರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಗೆ ಬಂದ್ ಮಾಡಲು ನಿರ್ಣಯ ಕೈಗೊಂಡಿದ್ದಾರೆ. ಇದು ಜು. 13ರಿಂದ 31ರವರೆಗೆ ಜಾರಿಯಲ್ಲಿರಲಿದೆ. ಸ್ವಯಂಪ್ರೇರಣೆಯಿಂದ ಕೈಗೊಂಡ ಈ ನಿರ್ಣಯ ಪರಿಣಾಮಕಾರಿಯಾಗಬೇಕಾದರೆ ಜಿಲ್ಲಾಧಿಕಾರಿ, ಈಗಿರುವ ಲಾಕ್ಡೌನ್ ಸಮಯವನ್ನು ರಾತ್ರಿ 8ಕ್ಕೂ ಮೊದಲಿಗೆ ಜಾರಿಗೊಳಿಸಬೇಕು ಎಂದು ಧಾರವಾಡ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭು ನಡಕಟ್ಟಿ, ಉಪಾಧ್ಯಕ್ಷ ಅಶೋಕ ದೊಡ್ಡಮನಿ, ಕಾರ್ಯದರ್ಶಿ ರವೀಂದ್ರ ಆಕಳವಾಡಿ, ಇತರರು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಬಟ್ಟೆ ವ್ಯಾಪಾರ ಸ್ವಯಂಪ್ರೇರಿತ ಬಂದ್
ಧಾರವಾಡ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಬಟ್ಟೆ ವ್ಯಾಪಾರಸ್ಥರು ಶನಿವಾರ ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರು.
ಜಿಲ್ಲಾಡಳಿತದಿಂದ ಭಾನುವಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದಕ್ಕೆ ಬೆಂಬಲ ಸೂಚಿಸಿರುವ ನಗರದ ಬಟ್ಟೆ ವ್ಯಾಪಾರಸ್ಥರು ಶನಿವಾರವೂ ಬಟ್ಟೆ ವ್ಯಾಪಾರ ಬಂದ್ ಮಾಡಿ ಸ್ವಯಂಪ್ರೇರಿತ ಲಾಕ್ಡೌನ್ ಪಾಲಿಸಿದರು. ಕರೊನಾ ನಿಯಂತ್ರಣಕ್ಕೆ ಬರುವವರೆಗೆ ಮುಂದಿನ ಶನಿವಾರ, ಭಾನುವಾರ ಬಟ್ಟೆ ಅಂಗಡಿಗಳನ್ನು ಬಂದ್ ಮಾಡಲು ವ್ಯಾಪಾರಸ್ಥರು ನಿರ್ಧರಿಸಿದ್ದಾರೆ.
ಬಾಧಿತ ಜಿಲ್ಲೆಗಳಲ್ಲೂ ಲಾಕ್ಡೌನ್ ಆಗಲಿ
ಹುಬ್ಬಳ್ಳಿ: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನಷ್ಟೇ ಅಲ್ಲ, ಬಾಧಿತ ಜಿಲ್ಲೆಗಳೆಲ್ಲವನ್ನೂ ಲೌಕ್ಡೌನ್ ಮಾಡುವ ಅಗತ್ಯವಿದೆ ಎಂದು ಕ್ರೆಡೈ ಕರ್ನಾಟಕ ಉಪಾಧ್ಯಕ್ಷ ಪ್ರದೀಪ ರಾಯ್ಕರ್ ಮನವಿ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್ ಹರಡುವಿಕೆ ಕಡಿಮೆ ಮಾಡಲು ವಿವಿಧ ರಾಜ್ಯಗಳು ವಿಭಿನ್ನ ರೀತಿಯ ಲಾಕ್ಡೌನ್ ಅಳವಡಿಸಿಕೊಂಡಿವೆ. ವೈರಸ್ ಸರಪಳಿ ತಡೆಯಲು ಲಾಕ್ಡೌನ್ ಅಳವಡಿಕೆ ಕಡ್ಡಾಯ. ಗ್ರಾಮೀಣ ಭಾಗದಲ್ಲೂ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇದನ್ನು ತಡೆಯಲೇಬೇಕಾದ ಅನಿವಾರ್ಯತೆ ನಮ್ಮೆದುರು ಇದೆ. ಲಾಕ್ಡೌನ್ ಇಲ್ಲದಿದ್ದರೆ ಜನರು ಮತ್ತೊಂದೆಡೆ ಓಡಾಡಿ ಸೋಂಕು ಹರಡಿಸಲಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಆದ್ಯತೆಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಾಮಾನ್ಯ ಜನರು ಮನೆಯಲ್ಲಿಯೇ ಉಳಿಯಲು, ಸಮಾಜ ಮತ್ತು ಕುಟುಂಬಗಳನ್ನು ರಕ್ಷಿಸಲು ಸ್ವಯಂ ಪ್ರೇರಿತರಾಗಿ ನಿರ್ಧರಿಸಬೇಕು ಎಂದು ಪ್ರಕಟಣೆಯಲ್ಲಿ ಅವರು ಬಯಸಿದ್ದಾರೆ.