ಜಿಲ್ಲೆ

ಲಾಕ್​ಡೌನ್ ಮಹತ್ವ ಅರಿಯದಾದರೆ?

ಧಾರವಾಡ: ಜನರ ಆರೋಗ್ಯದ ಹಿತದೃಷ್ಟಿಯಿಂದಲೇ ಕೇಂದ್ರ ಸರ್ಕಾರ ಲಾಕ್​ಡೌನ್ ಅವಧಿ ವಿಸ್ತರಣೆ ಮಾಡಿದೆ. ಆದರೆ, ನಗರದಲ್ಲಿ ಜನರು ಓಡಾಡುತ್ತಿರುವುದನ್ನು ಕಂಡರೆ ಲಾಕ್​ಡೌನ್ ತೆರವಾಗಿದೆಯೇ ಎಂಬ ಭಾವನೆ ಮೂಡುವಂತಿದೆ.

ಲಾಕ್​ಡೌನ್ ಅವಧಿ ವಿಸ್ತರಣೆಯಾದ ಎರಡ್ಮೂರು ದಿನಗಳ ಕಾಲ ಪೊಲೀಸರು ಅತ್ಯಂತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದರು. ಆದರೆ ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ಕೆಲ ನಿಯಮಗಳನ್ನು ಸಡಿಲಿಗೊಳಿಸಿರುವ ಹಿನ್ನೆಲೆಯಲ್ಲಿ ಜನರ ಓಡಾಟಕ್ಕೆ ಇನ್ನೂ ಅನುಕೂಲವಾದಂತಾಗಿದೆ. ಪೊಲೀಸರು ತಪಾಸಣೆ ನಡೆಸಿದರೂ ಅಗತ್ಯ ವಸ್ತುಗಳ ಖರೀದಿಗೆ ತೆರಳುತ್ತಿದ್ದೇವೆ ಎಂದು ಹೇಳಿಕೊಂಡೇ ಓಡಾಟ ಪ್ರಾರಂಭಿಸಿದ್ದಾರೆ.

ಕರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಧಾರವಾಡ ಜಿಲ್ಲೆಯನ್ನೂ ಹಾಟ್​ಸ್ಪಾಟ್ ಪಟ್ಟಿಗೆ ಸೇರಿಸಿದೆ. ಆದಾಗ್ಯೂ ಮಾರುಕಟ್ಟೆ, ಲೈನ್ ಬಜಾರ್, ಶಿವಾಜಿ ವೃತ್ತ, ಕಲ್ಯಾಣನಗರ, ಹು-ಧಾ ಮುಖ್ಯ ರಸ್ತೆ ಸೇರಿ ಬಹುತೇಕ ಕಡೆಗಳಲ್ಲಿ ವಾಹನ ಸಂಚಾರ ಎಂದಿನಂತೆ ಕಾಣುತ್ತಿದೆ. ಇದಲ್ಲದೆ, ಹು-ಧಾ ಮಹಾನಗರ ಪಾಲಿಕೆ ಆಸ್ತಿ ಕರ ಪಾವತಿಗೆ ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಕೆಲ ಬ್ಯಾಂಕ್​ಗಳ ಎದುರು ಜನರು ಜಮಾಯಿಸಿದ್ದಾರೆ. ಕೆಲ ಕಡೆಗಳಲ್ಲಿ ಸಾಮಾಜಿಕ ಅಂತರ ಸಹ ಪಾಲನೆಯಾಗುತ್ತಿಲ್ಲ.

ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಡೆಸಿರುವ ಪ್ರಯತ್ನಕ್ಕೆ ಜನರ ಸಹಕಾರ ಅತ್ಯಂತ ಮುಖ್ಯವಾಗಿದೆ.