ಜಿಲ್ಲೆ

ಲಾಕ್​ಡೌನ್ ನಿಯಮ ಉಲ್ಲಂಘಿಸಬೇಡಿ

ಅಳ್ನಾವರ: ಜನರು ಸರ್ಕಾರದ ಲಾಕ್​ಡೌನ್-4ರ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಕ್ರಮಗಳಿಗೆ ಗುರಿಯಾಗಬಾರದು ಎಂದು ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ಹೇಳಿದರು.

ಪಟ್ಟಣದಲ್ಲಿ ವರ್ತಕರೊಂದಿಗೆ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಭಾನುವಾರ ಹೊರತುಪಡಿಸಿ ವಾರದ 6 ದಿನಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಪರಸ್ಪರ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಬೇಕು. ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್​ಗಳನ್ನು ಕಡ್ಡಾಯವಾಗಿ ಬಳಸಬೇಕು. ಎಲ್ಲ ಅಂಗಡಿಗಳ ಮುಂದೆ ಕಸದ ಡಬ್ಬಗಳನ್ನು ಇಡಬೇಕು. ಪಾನ್ ಬೀಡಾ ಅಂಗಡಿಗಳಲ್ಲಿ ತಂಬಾಕು ವಸ್ತುಗಳನ್ನು ಮಾರಾಟ ಮಾಡಬಾರದು. ಸಿಕ್ಕ ಸಿಕ್ಕಲ್ಲಿ ಉಗುಳುವುದು, ಕಸ ಚೆಲ್ಲುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಕರೊನಾ ಸೋಂಕು ಪಟ್ಟಣದಲ್ಲಿ ಹರಡದಂತೆ ಮುಂಜಾಗ್ರತೆ ವಹಿಸಬೇಕು. ವಿನಾಕಾರಣ ಗುಂಪು ಗುಂಪಾಗಿ ಸೇರಬಾರದು. ಎಲ್ಲ ಧಾರ್ವಿುಕ ಸ್ಥಳಗಳಲ್ಲಿ ಸಾಮೂಹಿಕವಾಗಿ ಸೇರುವುದು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ವಾಹನಗಳ ಸಂಚಾರದಲ್ಲಿ ತಪ್ಪುಗಳು ಕಂಡುಬಂದಲ್ಲಿ ಪೊಲೀಸ್ ಇಲಾಖೆ ಕೈಗೊಳ್ಳುವ ದಿಟ್ಟ ಕ್ರಮಗಳಿಗೆ ನಮ್ಮ ಇಲಾಖೆಯಿಂದ ಸಹಕಾರ ನೀಡಲಾಗುವುದು ಎಂದು ತಹಸೀಲ್ದಾರ್ ಅಮರೇಶ ಪಮ್ಮಾರ ಹೇಳಿದರು.