ಶಿರಸಿ: ಲಾಕ್ಡೌನ್ ಆದೇಶದ ನಡುವೆಯೂ ಭಾನುವಾರ ನಗರದ ಮೀನು ಮಾರುಕಟ್ಟೆಯಲ್ಲಿ ಜನದಟ್ಟಣೆ ಸೃಷ್ಟಿಯಾಗಿ ಆತಂಕಕ್ಕೆ ಕಾರಣವಾಗಿದೆ. ಅಗತ್ಯ ವಸ್ತುಗಳನ್ನು ಮನೆಮನೆಗೆ ಪೂರೈಕೆ ಮಾಡುವ ವ್ಯವಸ್ಥೆಯಿದ್ದರೂ ಜನರು ಮಾತ್ರ ನೆಪವೊಡ್ಡಿ ಬೀದಿಗೆ ಬರುವುದನ್ನು ನಿಲ್ಲಿಸದ ಕಾರಣ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಸಾಮಾಜಿಕ ಅಂತರ ಕಾಪಾಡುವ ಹಿನ್ನೆಲೆಯಲ್ಲಿ ಲಾಕ್ಡೌನ್ ಆದೇಶದ ಜತೆ ಜನದಟ್ಟಣೆ ನಿಯಂತ್ರಿಸಲು ಸೆಕ್ಷನ್ 144 ಜಾರಿ ಮಾಡಿದ್ದರೂ ನಗರದಲ್ಲಿ ಸಾರ್ವಜನಿಕರು ಬೀದಿಗೆ ಬರುತ್ತಿದ್ದಾರೆ.
ಇಲ್ಲಿನ ಬಸ್ ನಿಲ್ದಾಣದ ಪಕ್ಕದಲ್ಲಿನ ಮೀನು ಮಾರುಕಟ್ಟೆಗೆ ಬೆಳ್ಳಂಬೆಳಗ್ಗೆ ಮೀನಿಗಾಗಿ ಜನರು ಮುಗಿಬಿದ್ದಿದ್ದರು. ಮನೆಮನೆಗೆ ಮೀನು ಪೂರೈಕೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರೂ ಬೆಳಗ್ಗೆ 7 ಗಂಟೆಗಾಗಲೇ ನೂರಾರು ಜನರು ವೆರೈಟಿ ಮೀನಿಗಾಗಿ ಸಾಮಾಜಿಕ ಅಂತರ ಮರೆತು ಖರೀದಿಸಿದರು.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿದರು. ಇದೇ ವೇಳೆ ವ್ಯಾಪಾರಿಗಳಿಗೆ ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಮೀನು ಮಾರದಂತೆ ಪೊಲೀಸರು ಎಚ್ಚರಿಕೆ ನೀಡಿದ ನಂತರ ಮನೆಮನೆಗೆ ಮೀನು ಪೂರೈಸಲು ವ್ಯಾಪಾರಿಗಳು ತೆರಳಿದರು.
ದಿನಸಿ ಅಂಗಡಿಗಳು ಬಂದ್: ಕಳೆದೆರಡು ದಿನಗಳಿಂದ ಅಲ್ಲಲ್ಲಿ ತೆರೆದಿದ್ದ ದಿನಸಿ ಅಂಗಡಿಗಳನ್ನು ತೆರೆಯದಂತೆ ಪೊಲೀಸರು ಸೂಚಿಸಿದ್ದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಅಂಗಡಿಗಳಿಗೂ ಬೀಗ ಹಾಕಲಾಗಿತ್ತು. ನಗರದಲ್ಲಿನ 1 ಸೂಪರ್ ಮಾರ್ಕೆಟ್ ಬಂದ್ ಮಾಡಲಾಗಿತ್ತು. ಅನಧಿಕೃತವಾಗಿ 1 ಸೂಪರ್ ಮಾರ್ಕೆಟನ್ನು ತೆಗೆದ ಪರಿಣಾಮ ಅದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಡ್ಗಳಿಗೆ ತರಕಾರಿ, ಹಣ್ಣು, ಹಾಲುಗಳನ್ನು ವಾಹನಗಳ ಮೂಲಕ ವಿತರಿಸುವ ವ್ಯವಸ್ಥೆ ಮಾಡಲಾಗಿದ್ದು, ಬಹಿರಂಗವಾಗಿ ಜನರು ಓಡಾಡದಂತೆ ನಿಯಂತ್ರಿಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕೆಲವು ಹೊಟೆಲ್ಗಳು ಬಾಗಿಲು ತೆರೆದಿದ್ದು, ಪಾರ್ಸೆಲ್ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ.
ಪಾಸ್ ದುರ್ಬಳಕೆ: ತುರ್ತು ಸೇವೆಯ ಹೆಸರಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಪಡೆಯಲು ಪೊಲೀಸ್ ಇಲಾಖೆಯಿಂದ ಪಾಸ್ ಪಡೆದವರು ದುರ್ಬಳಕೆ ಮಾಡಿಕೊಂಡ ಘಟನೆ ನಗರದ ಪ್ರಭು ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ. ಶನಿವಾರಕ್ಕೆ ಸೀಮಿತಗೊಳಿಸಿದ್ದ ಪಾಸನ್ನು ಭಾನುವಾರವೂ ತಂದು ಪೆಟ್ರೋಲ್ ಪಡೆದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ರಸ್ತೆಯ ಮೇಲೆ ಅನಗತ್ಯವಾಗಿ ವಾಹನ ಓಡಿಸುವವರ ವಾಹನ ಸೀಜ್ ಮಾಡಲಾಗುವುದು. ದಾಖಲಾತಿಗಳನ್ನು ಇಲಾಖೆ ವಶಕ್ಕೆ ಪಡೆಯಲಾಗುವುದು. ಜತೆ ಪ್ರಕರಣವನ್ನೂ ದಾಖಲಿಸಲು ಇಲಾಖೆ ಕ್ರಮಕೈಗೊಂಡಿದೆ. ಮೊದಲ ದಿನದಂದು 15ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ನಿತ್ಯವೂ ಈ ಕ್ರಮ ಜಾರಿಯಲ್ಲಿರಲಿದೆ. - ಜಿ.ಟಿ.ನಾಯ್ಕ ಡಿವೈಎಸ್ಪಿ
ಮದ್ಯಕ್ಕಾಗಿ ಬೀಗ ಮುರಿದರು: ಲಾಕ್ಡೌನ್ ನಂತರ ಮದ್ಯ ವ್ಯಸನಿಗಳು ಮದ್ಯ ಸಿಗದೆ ಪರದಾಡುತ್ತಿದ್ದು, ನಗರದ ಮಧು ವೈನ್ಸ್ ಹಾಗೂ ದಾಸನಕೊಪ್ಪದ ವೈನ್ ಶಾಪ್ ಬೀಗ ಮುರಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಕೆಲವು ವೈನ್ ಶಾಪ್ಗಳಲ್ಲಿ ಇಲಾಖೆಯಿಂದ ಹಾಕಿದ ಮುದ್ರೆ ಕೂಡ ಹರಿದು ಬೀಸಾಡಲಾಗಿದೆ. ವಿಷಯ ತಿಳಿದ ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮತ್ತೆ ಬೀಗ ಹಾಕಿ ಸೀಜ್ ಮಾಡಿದ್ದಾರೆ. ಜತೆ, ಭಾನುವಾರ ತಾಲೂಕಿನ ವಿವಿಧ ಕಡೆ ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ ಅಕ್ರಮ ಮದ್ಯ ವಶಕ್ಕೆ ಪಡೆದಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಿದ್ದಾರೆ.