ಜಿಲ್ಲೆ

ಲಾಕ್ ಡೌನ್​ನಿಂದ ಒಪ್ಪೊತ್ತಿನ ಊಟಕ್ಕೂ ಪರದಾಟ

ಗಜೇಂದ್ರಗಡ: ಲಾಕ್ ಡೌನ್ ಘೊಷಣೆ ಮಾಡಿರುವುದರಿಂದ ಅತ್ಯಂತ ಸಂಕಷ್ಟಕ್ಕೆ ಸಿಲುಕಿರುವವರು ಕೂಲಿ ಹಾಗೂ ವಲಸೆ ಕಾರ್ವಿುಕರು. ಗುಳೆ ಹೋದವರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ. ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ವಣವಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಭಾಗದ ಕೂಲಿಕಾರ್ವಿುಕರು ಸಹಾಯಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಂಡಿದ್ದಾರೆ.

ಕಟ್ಟಡ ನಿರ್ವಣದ ಕೂಲಿ ಕೆಲಸಕ್ಕೆಂದು ಮಂಗಳೂರಿಗೆ ಗುಳೆ ಹೋಗಿದ್ದ ಸಮೀಪದ ಬೆಣಸಮಟ್ಟಿ ಗ್ರಾಮದ ಹತ್ತಕ್ಕೂ ಹೆಚ್ಚು ಕೂಲಿ ಕಾರ್ವಿುಕರು ಮಂಗಳೂರಿನ ತಣ್ಣೀರಭಾವಿಯಲ್ಲಿ ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಕೊಡಗಲಿ ಮತ್ತು ಚಿಕ್ಕಕೊಡಗಲಿ ತಾಂಡಾ, ಬದಾಮಿ ತಾಲೂಕಿನ ಅನಂತಗಿರಿ ತಾಂಡಾ, ಕೊಪ್ಪಳ ಜಿಲ್ಲೆಯ ವೆಂಕಟಾಪೂರ ತಾಂಡಾದ 15ಕ್ಕೂ ಹೆಚ್ಚು ಕೂಲಿ ಕಾರ್ವಿುಕರು ಮಂಗಳೂರಿನಿಂದ 20 ಕಿ.ಮೀ ದೂರಲ್ಲಿರುವ ಪರಂಗಿಪೇಟೆಯ ಕುಂಬಳಬಜಾರನಲ್ಲಿ ಸಂಕಷ್ಟಕ್ಕೆ ಸಿಲುಕಿ ಆಹಾರಕ್ಕಾಗಿ ಪರದಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕೂಲಿ ಮಾಡಿ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು. ಆದರೆ, ಲಾಕ್ ಡೌನ್ ಆಗಿರುವುದರಿಂದ ಗುಡಿಸಲಿನಿಂದ ಹೊರಬಂದಿಲ್ಲ. ಟೆಂಟ್​ನಲ್ಲೇ ವಾಸ ಮಾಡುತ್ತಿರುವುದರಿಂದ ಚಿಕ್ಕ ಮಕ್ಕಳು ಸೇರಿ ದೊಡ್ಡವರೂ ಹಸಿವಿನಿಂದ ಬಳಲುವಂತಾಗಿದೆ. ಇಲ್ಲಿನವರಿಗೆ ಎರಡು ಹೊತ್ತು ಅನ್ನ ಸಿಗುತ್ತಿಲ್ಲ. ತರಕಾರಿ ಖರೀದಿಸುವ ಶಕ್ತಿಯೂ ಇಲ್ಲ. ಕೂಲಿ ಕಾರ್ವಿುಕರು ಒಪ್ಪೊತ್ತಿನ ಊಟಕ್ಕೂ ಕಣ್ಣೀರು ಹಾಕುತ್ತಿದ್ದಾರೆ. ಲಾಕ್ ಡೌನ್ ಇಲ್ಲದಿದ್ದರೆ ನಾವು ಯಾರ ಬಳಿಯೂ ಸಹಾಯ ಕೇಳುತ್ತಿರಲಿಲ್ಲ. ಆದರೀಗ ನಮ್ಮ ಪರಿಸ್ಥಿತಿ ಸರಿ ಇಲ್ಲ. ಹಾಗಾಗಿ, ಯಾರಾದರೂ ಬದುಕೋಕೆ ಸ್ವಲ್ಪ ಸಹಾಯ ಮಾಡಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಈ ಕುರಿತು ಪತ್ರಿಕೆಯು ದೂರವಾಣಿ ಮೂಲಕ ಸಂರ್ಪಸಿದಾಗ ಲಾಕ್ ಡೌನ್​ನಿಂದಾಗಿ ಸಂಕಷ್ಟದಲ್ಲಿದ್ದೇವೆ. ಆಹಾರವಿಲ್ಲದೆ ಪರದಾಡುತ್ತಿದ್ದೇವೆ. ಆಹಾರಕ್ಕಾಗಿ ಸಹಾಯವಾಣಿಗೆ ಕರೆ ಮಾಡಿದರೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಅಸಹಾಯಕತೆ ಹೇಳಿಕೊಂಡರು.