ಜಿಲ್ಲೆ

ಲಾಂಗ್ ಹಿಡಿದು ಜಗಳವಾಡಿದ್ದವನ ಬಂಧನ

ಮೈಸೂರು: ಅಗ್ರಹಾರದ ಉತ್ತರಾಧಿಮಠದ ರಸ್ತೆಯಲ್ಲಿ ಹಾಡಹಗಲೇ ಲಾಂಗ್ ಝಳಪಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ಕೃಷ್ಣರಾಜ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ, ಮತ್ತೊಬ್ಬನಿಗಾಗಿ ಶೋಧ ಮುಂದುವರಿಸಿದ್ದಾರೆ.

ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡು ತ್ವರಿತ ಕ್ರಮಕೈಗೊಂಡಿದ್ದಾರೆ. ಸೆಕ್ಯೂರಿಟಿ ಏಜೆನ್ಸಿಯೊಂದರ ಮ್ಯಾನೇಜರ್ ದಿನೇಶ್‌ನನ್ನು ಬಂಧಿಸಲಾಗಿದ್ದು, ಇವರೊಂದಿಗೆ ಜಗಳವಾಡಿದ್ದ ಭದ್ರತಾ ಸಿಬ್ಬಂದಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಎರಡು ತಿಂಗಳ ವೇತನ ನೀಡಿಲ್ಲ ಎಂಬ ವಿಚಾರಕ್ಕೆ ಭದ್ರತಾ ಸಿಬ್ಬಂದಿ ಹಾಗೂ ಮ್ಯಾನೇಜರ್ ನಡುವೆ ಜಗಳ ನಡೆದಿತ್ತು. ಆ ವೇಳೆ ರಸ್ತೆಯ ಮೂಲೆಯಲ್ಲಿ ಯಾರೋ ಇಟ್ಟಿದ್ದ ಕಳೆ ಕತ್ತರಿಸುವ ಉದ್ದವಾದ ಮಚ್ಚು ಭದ್ರತಾ ಸಿಬ್ಬಂದಿಯ ಕಣ್ಣಿಗೆ ಬಿದ್ದಿದೆ. ಆವೇಶದಲ್ಲಿ ಅದನ್ನು ತೆಗೆದುಕೊಂಡು ಮ್ಯಾನೇಜರ್ ಬಳಿ ಹೋಗಿದ್ದಾನೆ.

ಆದರೆ ಅದರಿಂದ ಹಲ್ಲೆ ನಡೆಸಲು ಯತ್ನಿಸಿಲ್ಲ. ಅಷ್ಟರಲ್ಲಿ ಅಲ್ಲಿದ್ದವರು ಮಚ್ಚನ್ನು ಕಿತ್ತುಕೊಂಡು ಪಕ್ಕದಲ್ಲಿಟ್ಟಿದ್ದಾರೆ. ಆಗ ಮ್ಯಾನೇಜರ್ ಕೂಡ ಅದನ್ನು ಎತ್ತಿಕೊಂಡಿದ್ದಾನೆ. ಯಾರೂ ಅದರಿಂದ ಹಲ್ಲೆ ನಡೆಸುವ ಪ್ರಯತ್ನ ಮಾಡಿದಂತಿಲ್ಲ.

ದರೂ ಸಾರ್ವಜನಿಕವಾಗಿ ಈ ರೀತಿಯಲ್ಲಿ ವರ್ತಿಸಿ, ಭಯಭೀತ ಹಾಗೂ ಆತಂಕದ ವಾತಾವರಣ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.