ಜಿಲ್ಲೆ

ಲಸಿಕೆಯಿಂದ ವಂಚಿತರಾಗದಿರಲಿ ಮಕ್ಕಳು

ಚಿತ್ರದುರ್ಗ: ಜಿಲ್ಲೆಯಲ್ಲಿ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕೆಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಅಧಿಕಾರಿ ಗಳಿಗೆ ಸೂಚಿಸಿದರು.

ಜಿಪಂನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಲಸಿಕಾ ಕಾರ‌್ಯಪಡೆ ಸಭೆಯಲ್ಲಿ ಮಾತನಾಡಿ, ಮಾರಕ ಕಾಯಿಲೆಗಳಿಂದ ದೂರವಿಟ್ಟು, ಮಕ್ಕಳ ಆರೋಗ್ಯಕ್ಕಾಗಿ ಬಿಸಿಜಿ, ಹೆಪಟೈಟಿಸ್ ಬಿ, ಪೆಂಟಾ ಸೇರಿದಂತೆ ವಿವಿಧ ಲಸಿಕೆಗಳನ್ನು ನೀಡಲಾಗುತ್ತಿದೆ.

ಈ ಸಾರ್ವತ್ರಿಕ ಲಸಿಕಾ ಯೋಜನೆಯಲ್ಲಿ ಶೇ.100 ಗುರಿ ಸಾಧಿಸಬೇಕು. ಯಾವುದೇ ಕಾರಣಕ್ಕೂ ಲಸಿಕೆಯಿಂದ ಮಕ್ಕಳು ವಂಚಿತರಾಗದಂತೆ ಅಗತ್ಯ ಕ್ರಮ ವಹಿಸಬೇಕು. ಇದಕ್ಕಾಗಿ ವಿವಿಧ ಇಲಾಖೆಗಳ ಸಹಕಾರ ಮತ್ತು ಸಮನ್ವಯದೊಂದಿಗೆ ಕಾರ‌್ಯನಿರ್ವಹಿಸುವ ಮೂಲಕ ಈ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಮಾತನಾಡಿ, ವಿಶ್ವ ಲಸಿಕಾ ಸಪ್ತಾಹದ ಅಂಗವಾಗಿ ಈಗಾಗಲೇ ಏ.24 ರಿಂದ ಪ್ರಾರಂಭವಾಗಿರುವ ವಿಶೇಷ ಲಸಿಕಾ ಅಭಿಯಾನ ಏ.30 ರವರೆಗೆ ನಡೆಯಲಿದೆ. ಪ್ರತಿ ಗುರುವಾರ ಮತ್ತು ಮಂಗಳವಾರ ದೈನಂದಿನ ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದರೂ, ವಿಶೇಷ ಲಸಿಕಾ ಸಪ್ತಾಹ ಕಾರ್ಯಕ್ರಮ ಲಸಿಕೆ ಪಡೆಯದೇ ಬಿಟ್ಟು ಹೋದ ಮಕ್ಕಳಿಗೆ ಹಾಗೂ ಸೇವಾ ವಂಚಿತ ಪ್ರದೇಶದಲ್ಲಿ ವಿಶೇಷ ಲಸಿಕಾ ಅಭಿಯಾನ ನಡೆಸಲಾಗುತ್ತದೆ ಎಂದರು.

ಜೂನ್ ಹಾಗೂ ಜುಲೈನಲ್ಲಿ ಶಾಲಾ ಲಸಿಕಾಕರಣದ ಅಭಿಯಾನ ನಡೆಸಬೇಕಿದೆ. ಶಿಕ್ಷಣ ಇಲಾಖೆಯ ಎಲ್ಲ ಶಾಲೆಗಳಲ್ಲಿ ಲಸಿಕಾ ಸತ್ರ ಹಮ್ಮಿಕೊಳ್ಳಲು ಕ್ರಮವಹಿಸಬೇಕು. 5-6, 10 ಮತ್ತು 16 ವರ್ಷದ ಮಕ್ಕಳಿಗೆ ಲಸಿಕೆ ನೀಡಬೇಕಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ನೋಂದಾಯಿಸಿದ 20182 ಶಿಶುಗಳ ಪೈಕಿ 19871 ಶಿಶುಗಳಿಗೆ ಪೂರ್ಣ ಪ್ರಮಾಣದ ಲಸಿಕೆ ನೀಡುವ ಮೂಲಕ ಶೇ.98 ಹಾಗೂ 2024-25ರಲ್ಲಿ ನೋಂದಾಯಿಸಿದ 19184 ಶಿಶುಗಳ ಪೈಕಿ 18441 ಶಿಶುಗಳಿಗೆ ಪೂರ್ಣ ಪ್ರಮಾಣದ ಲಸಿಕೆ ನೀಡುವ ಮೂಲಕ ಶೇ.96 ಪ್ರಗತಿ ಸಾಧಿಸಲಾಗಿದೆ ಎಂದು ಅಭಿನವ್ ಮಾಹಿತಿ ನೀಡಿದರು.

ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಡಿಡಿಪಿಐ ಎಂ.ಆರ್.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್.ಬಣಕಾರ್, ಟಿಎಚ್‌ಒ ಡಾ.ಬಿ.ವಿ.ಗಿರೀಶ್ ಇತರರಿದ್ದರು.