ಜಿಲ್ಲೆ

ಲಸಿಕೆಯಿಂದ ಅಡ್ಡ ಪರಿಣಾಮ ಇಲ್ಲ - ಡಿ.ಎಂ.ಐಹೊಳೆ

ರಾಯಬಾಗ: ಕರೊನಾ ವೈರಸ್ ಹರಡುವಿಕೆ ತಡೆಗಟ್ಟಲು ನೀಡುತ್ತಿರುವ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಜನರು ಊಹಾಪೋಹಗಳಿಗೆ ಕಿವಿಗೊಡದೆ ಲಸಿಕೆ ಪಡೆದುಕೊಳ್ಳಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಗಳು ಮನುಷ್ಯನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ಕರೊನಾ ವೈರಸ್ ವಿರುದ್ಧ ಹೋರಾಡಲು ಶಕ್ತಿ ನೀಡುತ್ತವೆ. ಹಾಗಾಗಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಲಸಿಕೆ ಉಪಯುಕ್ತತೆ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಸೆಂಟರ್‌ನಲ್ಲಿ 30 ಬೆಡ್ ಇದ್ದು, 50 ಬೆಡ್‌ಗೆ ಹೆಚ್ಚಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಬೆಡ್ ನೀಡುವಂತೆ ಮೇಲಧಿಕಾರಿಗಳೊಂದಿಗೆ ಮಾತನಾಡಲಾಗುವುದು. ಜನರು ಆತಂಕಕ್ಕೆ ಒಳಗಾಗದೇ ಎಲ್ಲರೂ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಂಡು ಸರ್ಕಾರದ ನಿರ್ದೇಶನ ಪಾಲಿಸಬೇಕು ಎಂದರು.

ಕುಡಚಿ ಶಾಸಕ ಪಿ.ರಾಜೀವ್ ಮಾತನಾಡಿ, ತಾಲೂಕಿಗೆ ಅಗತ್ಯ ಇರುವ ಆಕ್ಸಿಜನ್ ಪೂರೈಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದು. ಸಾರ್ವಜನಿಕ
ಆಸ್ಪತ್ರೆಯಲ್ಲಿ ವೆಂಟಿಲೇಟರ್ ಪ್ರಾರಂಭಿಸಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಸೋಂಕಿತರ ಸಂಖ್ಯೆಗೆ ಅನುಸಾರವಾಗಿ ರೆಮ್‌ಡೆಸಿವಿರ್ ಸಂಗ್ರಹಿಸಿ ಅದರ ಬಗ್ಗೆ ದಾಖಲೆ ಇಡಬೇಕು. ಎಂಬಿಬಿಎಸ್, ಬಿಎಎಂಎಸ್ ವೈದ್ಯಾಧಿಕಾರಿಗಳನ್ನು ನೇಮಿಸಿಕೊಳ್ಳುವಂತೆ ತಿಳಿಸಿದರು.

ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಬಾನೆ ಮಾತನಾಡಿ, ತಾಲೂಕಿನಲ್ಲಿ ಇಲ್ಲಿಯವರೆಗೆ ಕರೊನಾದಿಂದ 27 ಜನ ಸಾವನ್ನಪ್ಪಿದ್ದಾರೆ. 429 ಸಕ್ರಿಯ ಕೇಸ್‌ಗಳಿವೆ. 14,379 ಸ್ಯಾಂಪಲ್ ಸಂಗ್ರಹಿಸಿ ಟೆಸ್ಟ್‌ಗೆ ಕಳುಹಿಸಲಾಗಿದೆ. 391 ಜನ ಹೋಂ ಕ್ವಾರಂಟೈನ್ ಇದ್ದಾರೆ. 101 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 19 ಸಾವಿರ ಜನರು ಲಸಿಕೆ ಪಡೆದುಕೊಂಡಿದ್ದಾರೆ.

ಲಭ್ಯತೆ ಮೇರೆಗೆ 18 ರಿಂದ 45 ಒಳಗಿನ ವಯಸ್ಸಿನವರಿಗೆ ಲಸಿಕೆ ನೀಡಲು ಪ್ರಾರಂಭಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ತಾಪಂ ಇಒ ಪ್ರಕಾಶ ವಡ್ಡರ, ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಸಿಡಿಪಿಒ ಸಂತೋಷಕುಮಾರ ಕಾಂಬಳೆ, ತೋಟಗಾರಿಕೆ ಅಧಿಕಾರಿ ಎಂ.ಆರ್.ಕಳ್ಳಿಮನಿ, ಪಪಂ ಮುಖ್ಯಾಧಿಕಾರಿ ಎಸ್.ಆರ್.ಮಾಂಗ, ಬಿಇಒ ಪ್ರಭಾವತಿ ಪಾಟೀಲ, ಕೃಷಿ ಸಹಾಯಕ ನಿರ್ದೇಶಕ ಇಂದುಧರ ಹಿರೇಮಠ, ಪದ್ಮಜಾ ಪಾಟೀಲ ಇತರರು ಇದ್ದರು.