ಬೆಳಗಾವಿ ನಗರದ ಸರ್ದಾರ ಹೈಸ್ಕೂಲ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕರೊನಾ ಲಸಿಕಾ ಮೇಳದಲ್ಲಿ ಸಂಸದೆ ಮಂಗಲ ಅಂಗಡಿ ಮಾತನಾಡಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ ಎಚ್.ವಿ. ಇತರರು ಇದ್ದರು. 
ಜಿಲ್ಲೆ

ಲಸಿಕೆ ಪಡೆದು ಕರೊನಾ ತೊಲಗಿಸಿ

ಬೆಳಗಾವಿ: ಸಂಭವನೀಯ ಕೋವಿಡ್ 3ನೇ ಅಲೆ ಹಿನ್ನೆಲೆಯಲ್ಲಿ ಎಲ್ಲರಿಗೂ ಕೋವಿಡ್ ನಿರೋಧಕ ಲಸಿಕೆ ನೀಡುವ ಮಹತ್ತರ ಉದ್ದೇಶದಿಂದ ಸರ್ಕಾರವು ರಾಜ್ಯದಾದ್ಯಂತ ಆಯೋಜಿಸಿರುವ ಲಸಿಕಾ ಮೇಳದ ಪ್ರಯೋಜನವನ್ನು ಎಲ್ಲ ಸಾರ್ವಜನಿಕರೂ ಪಡೆದುಕೊಳ್ಳಬೇಕು ಎಂದು ಸಂಸದೆ ಮಂಗಲ ಅಂಗಡಿ ಹೇಳಿದರು.

ನಗರದ ಸರ್ದಾರ ಹೈಸ್ಕೂಲ್ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಪಾಲಿಕೆ ಜಂಟಿಯಾಗಿ ಶುಕ್ರವಾರ ಏರ್ಪಡಿಸಿದ್ದ ಲಸಿಕಾ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೂರು ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಗುರಿ ತಲುಪಲು ಸಹಕರಿಸಬೇಕು ಎಂದು ಕೋರಿದರು.

ನಿರ್ಲಕ್ಷ್ಯ ಬೇಡ: ಕೋವಿಡ್-19 ಮುಕ್ತ ಸಮಾಜ ನಿರ್ಮಾಣಕ್ಕೆ ಸರ್ಕಾರ ಸಂಕಲ್ಪ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೆ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ. ಹಾಗಾಗಿ ಸಾರ್ವಜನಿಕರು ಲಸಿಕೆ ಪಡೆದುಕೊಳ್ಳಬೇಕು. ನಿರ್ಲಕ್ಷೃ ಮಾಡಬಾರದು. ಇದುವರೆಗೆ ಲಸಿಕೆ ಪಡೆಯದೇ ಇರುವವರು ಹಾಗೂ ಮೊದಲ ಡೋಸ್ ಪಡೆದುಕೊಂಡು ನಿಗದಿತ ಅವಧಿ ಪೂರೈಸಿದವರು ವ್ಯಾಕ್ಸಿನ್ ಪಡೆಯಬೇಕು ಎಂದರು.

ಎಲ್ಲೆಡೆ ವ್ಯವಸ್ಥೆ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯ ಎಲ್ಲ ಪ್ರಾಥಮಿಕ, ಸಮಯದಾಯ ಆರೋಗ್ಯ ಕೇಂದ್ರ, ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಪ್ರತಿಯೊಂದು ಗ್ರಾಮದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ವಾರ್ಡ್‌ವಾರು ಲಸಿಕಾ ಕೇಂದ್ರ ಸ್ಥಾಪಿಸಲಾಗಿದೆ. ಇದಲ್ಲದೆ, ಬೆಳಗಾವಿ ನಗರದ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಈಗಗಲೇ ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದೀಗ ಸೆ. 17ರಂದು ವಿಶೇಷವಾಗಿ 3 ಲಕ್ಷ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಹೀಗಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುತ್ತಿದೆ. ಕೆಲವು ಕಡೆ ಜನರು ಸ್ವಯಂ ಪ್ರೇರಣೆಯಿಂದ ಬಂದು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ಡಿಸಿ ತಿಳಿಸಿದರು.

ಜಿಪಂ ಸಿಇಒ ದರ್ಶನ ಎಚ್.ವಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ವಿ. ಮುನ್ಯಾಳ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಜಿಲ್ಲಾದ್ಯಂತ ಶೇ. 58.88 ಜನರಿಗೆ ವ್ಯಾಕ್ಸಿನ್

ಬೆಳಗಾವಿ ಜಿಲ್ಲಾದ್ಯಂತ ಶುಕ್ರವಾರ ಆಯೋಜಿಸಿದ್ದ ಕರೊನಾ ವ್ಯಾಕ್ಸಿನ್ ಮೆಗಾ ಮೇಳದಲ್ಲಿ 2,21,740 ಜನರಿಗೆ ವ್ಯಾಕ್ಸಿನ್ ನೀಡಲಾಯಿತು. 3,76,610 ಜನರಿಗೆ ವ್ಯಾಕ್ಸಿನ್ ನೀಡುವುದಕ್ಕೆ ಗುರಿ ಹಾಕಿಕೊಳ್ಳಲಾಗಿತ್ತು. ಅದರಲ್ಲಿ ಶೇ. 58.88ರಷ್ಟು ಜನರಿಗೆ ಲಸಿಕೆ ನೀಡಲಾಯಿತು.