ಜಿಲ್ಲೆ

ಲಸಿಕೆ ಅಭಿಯಾನಕ್ಕೆ ಸಿಬ್ಬಂದಿ ಕೊರತೆ

ಚಾಮರಾಜನಗರ : ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ಜ್ವರ ರೋಗ ನಿಯಂತ್ರಣಕ್ಕೆ ಹಮ್ಮಿಕೊಂಡಿರುವ ಕಾಲುಬಾಯಿ ಲಸಿಕಾ ಅಭಿಯಾನ ಸಿಬ್ಬಂದಿಯ ಕೊರತೆಯ ನಡುವೆಯೇ ನ.3 ರಿಂದ ಪ್ರಾರಂಭವಾಗುತ್ತಿದೆ.

ಜಿಲ್ಲೆಯ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಚಾಮರಾಜನಗರ ತಾಲೂಕಿನ ವ್ಯಾಪ್ತಿಯಲ್ಲಿ 70,802 ಹಸು ಮತ್ತು ಎತ್ತುಗಳು, 2344 ಎಮ್ಮೆ ಮತ್ತು ಕೋಣಗಳು ಇದೆ. ಗುಂಡ್ಲುಪೇಟೆಯಲ್ಲಿ 73,329 ಹಸು ಮತ್ತು ಎತ್ತುಗಳು, 287 ಎಮ್ಮೆ ಮತ್ತು ಕೋಣ, ಕೊಳ್ಳೇಗಾಲದಲ್ಲಿ 30,224 ಹಸು ಮತ್ತು ಎತ್ತುಗಳು, 1842 ಎಮ್ಮೆ ಮತ್ತು ಕೋಣಗಳು, ಹನೂರು 65,392 ಹಸು ಮತ್ತು ಎತ್ತುಗಳು, 4174 ಎಮ್ಮೆ ಮತ್ತು ಕೋಣ ಹಾಗೂ ಯಳಂದೂರು ತಾಲೂಕಿನ ವ್ಯಾಪ್ತಿಯಲ್ಲಿ 9623 ಹಸು ಮತ್ತು ಎತ್ತುಗಳು, 1262 ಎಮ್ಮೆ ಮತ್ತು ಕೋಣಗಳನ್ನು ಒಳಗೊಂಡಂತೆ ಒಟ್ಟು 2.59 ಲಕ್ಷ ಜಾನುವಾರುಗಳು ಇದೆ.

ಈ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಮಾರಾಣಾಂತಿಕ ಕಾಲುಬಾಯಿ ಜ್ವರವನ್ನು ನಿಯಂತ್ರಣಾ ಮಾಡುವ ನಿಟ್ಟಿನಲ್ಲಿ ನ.3 ರಿಂದ ಡಿ.2 ರವರೆಗೆ ಕಾಲುಬಾಯಿ ಲಸಿಕಾ ಅಭಿಯಾನ ನಡೆಯಲಿದೆ. ಜಿಲ್ಲೆಯಲ್ಲಿ ಈ ಅಭಿಯಾನಕ್ಕೆ 360 ಸಿಬ್ಬಂದಿಗಳು ಬೇಕಾಗಿದ್ದು, ಪ್ರಸ್ತುತ 120 ಸಿಬ್ಬಂದಿಗಳು ಮಾತ್ರ ಲಭ್ಯವಿದ್ದಾರೆ. ಹಾಗಾಗಿ ಈ ಬಾರಿಯ ಲಸಿಕಾ ಅಭಿಯಾನಕ್ಕೆ ಸಿಬ್ಬಂದಿ ಕೊರತೆ ಉಂಟಾಗಿದ್ದು, ಈ ನಡುವೆಯೂ ಲಸಿಕಾ ಅಭಿಯಾನಕ್ಕೆ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಮಂಜುನಾಥ್ ಅವರು ವಿಜಯವಾಣಿಗೆ ಮಾಹಿತಿ ನೀಡಿದರು.

ಸಿಬ್ಬಂದಿಗಳಿಗೆ ಅಗತ್ಯ ತರಬೇತಿ:

ಜಿಲ್ಲೆಯಲ್ಲಿ ಈಬಾರಿಯ ಕಾಲುಬಾಯಿ ಲಸಿಕಾ ಅಭಿಯಾನದಲ್ಲಿ 120 ಸಿಬ್ಬಂದಿಗಳು ಮಾತ್ರ ಭಾಗವಹಿಸುತ್ತಿದ್ದು, ಎಲ್ಲಾ ಸಿಬ್ಬಂದಿಗಳಿಗೂ ಅಗತ್ಯ ತರಬೇತಿಯನ್ನು ನೀಡಲಾಗಿದೆ. ಈಗಾಗಲೇ ಇಲಾಖೆಯಿಂದ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ನಡೆಸಿದ್ದು, ಸಿಬ್ಬಂದಿಗಳಿಗೆ ಬೇಕಾದ ಅಗತ್ಯ ಸಲಕರಣೆಗಳನ್ನು ನೀಡಲಾಗಿದೆ. ಜಿಲ್ಲೆಯ 2.59 ಲಕ್ಷ ಜಾನುವಾರುಗಳಿಗೆ ಬೇಕಾದ ಲಸಿಕೆ ಮತ್ತು ಸಿರಂಜ್‌ಗಳು ಲಭ್ಯವಿದ್ದು, ಡಿ.2 ರವರೆಗೆ ಅಭಿಯಾನವನ್ನು ಮುಗಿಸುವ ನಿಟ್ಟಿನಲ್ಲಿ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಗ್ರಾಮಗಳಲ್ಲಿ ಲಸಿಕೆ ಹಾಕುವ ಮುನ್ನಾ ದಿನವೇ ಆಯಾ ಗ್ರಾಮ ಪಂಚಾಯಿತಿ, ಹಾಲು ಉತ್ಪಾದಕರ ಸಹಕಾರ ಸಂಘ, ಮಹಿಳಾ ಸ್ವಸಹಾಯ ಸಂಘ ಹಾಗೂ ಕೃಷಿ ಸಖಿಯರ ಸಹಕಾರದೊಂದಿಗೆ ಪ್ರಚಾರ ಕಾರ್ಯಕ್ರಮವನ್ನು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿವಿಧ ಪ್ರಚಾರ ಸಾಮಗ್ರಗಳನ್ನು ಬಳಕೆ ಮಾಡಿಕೊಂಡು ಮನೆ-ಮನೆಗೂ ಅಭಿಯಾನದ ಕುರಿತು ಜಾಗೃತಿ ಮೂಡಿಸಲು ಕಾರ್ಯತಂತ್ರ ರೂಪಿಸಲಾಗಿದೆ.

ಭಾರತ್ ಪಶುಧನ್‌ನಲ್ಲಿ ದಾಖಲು:

ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮೂಲಕ ಜಾನುವಾರುಗಳ ಮಾಹಿತಿ ಸಂಗ್ರಹಿಸಲು, ಲಸಿಕೆ ಹಾಗೂ ಇನ್ನಿತರೆ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಇರುವ ಭಾರತ್ ಪಶುಧನ್ ಆ್ಯ್ನಲ್ಲಿ ಅಸಿಕಾ ಅಭಿಯಾನದ ಮಾಹಿತಿಯನ್ನು ದಾಖಲು ಮಾಡಲಾಗುತ್ತದೆ. ಈ ಆ್ಯಪ್ ಜಾನುವಾರುಗಳ ನೋಂದಣಿ, ಸಂಖ್ಯೆ, ವಯಸ್ಸು, ತಳಿ ಹಾಗೂ ಲಸಿಕ ವಿವರಗಳನ್ನು ಸಮೂದಿಸಲು ಸಹಕಾರಿಯಾಗಿದೆ. ನ.3 ರಿಂದ ಪ್ರಾರಂಭವಾಗುವ ಕಾಲುಬಾಯಿ ಲಸಿಕ ಕಾರ್ಯಕ್ರಮದ ಅಂಕಿ-ಅಂಶವನ್ನು ಸಿಬ್ಬಂದಿಗಳು ಭಾರತ್ ಪಶುಧನ್ ಆ್ಯಪ್‌ನಲ್ಲಿ ಪ್ರತಿದಿನವೂ ದಾಖಲು ಮಾಡಲಿದ್ದು, ಸಾರ್ವಜನಿಕರು ಕೂಡ ಈ ಆ್ಯಪ್ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಸಿಬ್ಬಂದಿಗಳು ಕೂಡ ಆ್ಯಪ್ ಬಳಕೆಯ ಕುರಿತು ಅಗತ್ಯ ತರಬೇತಿಯನ್ನು ಪಡೆದುಕೊಂಡಿದ್ದಾರೆ.

ರೋಗದ ತೀವ್ರತೆ ಕಡಿಮೆ: ಜಿಲ್ಲೆಯ ಕಾಡಂಚಿನ ಗ್ರಾಮಗಳ ಜಾನುವಾರುಗಳಲ್ಲಿ ಇತ್ತೀಚೆಗೆ ಚರ್ಮಗಂಟು ರೋಗ ಕಾಣಿಸಿಕೊಂಡಿತ್ತು. ಆದರೆ ಕಾಲುಬಾಯಿ ಜ್ವರದ ತೀವ್ರತೆ ದಿನೇದಿನೇ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕಾಲಕಾಲಕ್ಕೆ ಲಸಿಕೆಯನ್ನು ನೀಡುವ ಮೂಲಕ ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ಜ್ವರ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಲಸಿಕ ಅಭಿಯಾನ ನಡೆಯುತ್ತಿದೆ. ಈಗಾಗಲೇ ಪಶು ಪಾಲನಾ ಇಲಾಖೆ ಜಾನುವಾರುಗಳಿಗೆ ಓಲೆಯನ್ನು ಹಾಕಿದ್ದು, ಓಲೆ ಹಾಕದ 4 ತಿಂಗಳ ಮೇಲಿನ ಕರುಗಳಿದ್ದರೇ ಅವುಗಳಿಗೂ ಲಸಿಕೆ ಹಾಕುವ ಮೂಲಕ ಓಲೆಯನ್ನು ಹಾಕಲು ಕ್ರಮವಹಿಸಲಾಗಿದೆ. ಹಲವಾರು ಕಾಡಂಚಿನ ಪ್ರದೇಶಗಳ ಜಾನುವಾರುಗಳಲ್ಲಿ ಹಾಲು ಕಡಿಮೆಯಾಗುವುದು ಮತ್ತು ಗರ್ಭಪಾತವಾಗುತ್ತದೆ ಎಂಬ ಕಾರಣದಿಂದ ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಾರೆ. ಆದರೆ ರೈತರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಜಾನುವಾರುಗಳಿಗೆ ಲಸಿಕೆಯನ್ನು ಹಾಕಿಸಬೇಕು ಎಂದು ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ನ.3 ರಿಂದ ಡಿ.2 ರವರೆಗೆ ಲಸಿಕ ಅಭಿಯಾನ ಕಾರ್ಯಕ್ರಮ ನಡೆಯಲಿದೆ. ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಇರುವ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕಾಡಂಚಿನ ಗ್ರಾಮಗಳ ರೈತರು ಇಲಾಖೆಯ ಸಿಬ್ಬಂದಿಗಳಿಗೆ ಅಗತ್ಯ ಸಹಕಾರವನ್ನು ನೀಡಬೇಕು. ಡಾ.ಮಂಜುನಾಥ್, ಉಪನಿರ್ದೇಶಕ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಚಾಮರಾಜನಗರ