ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿನ 12ರಿಂದ 14ರ ವಯಸ್ಸಿನ ಮಕ್ಕಳಿಗೆ ಕರೊನಾ ಲಸಿಕೆ ಹಾಕಿಸುವ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾಯಿತು.
ನಗರದಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಸಿಹಿ ಪದಾರ್ಥ ನೀಡುವ ಮೂಲಕ ಕೋರ್ಬಿವ್ಯಾಕ್ಸ್ ಲಸಿಕೆ ಹಾಕಿಸಿಕೊಳ್ಳಲು ಪ್ರೋತ್ಸಾಹಿಸಿದರು.
ಕರೊನಾ ಸೋಂಕಿನ ಮೊದಲ, ಎರಡನೇ ಅಲೆ ಮತ್ತು ಮೂರನೇ ಅಲೆಯು ಇಡಿ ಜಗತ್ತನ್ನು ಬಾಧಿಸಿದೆ. ಇದು ಅನೇಕರ ಪ್ರಾಣ ಹಾನಿ, ಇದು ಸಂಕಷ್ಟಕ್ಕೆ ಕಾರಣವಾಯಿತು. ಇದನ್ನು ಸಮರ್ಥವಾಗಿ ಎದುರಿಸಲು ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಂಡು ಬರಲಾಗುತ್ತಿದೆ. ಇದನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು. ಲಸಿಕಾಕರಣದ ಯಶಸ್ವಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್.ಕಬಾಡೆ, ಆರ್‌ಸಿಎಚ್ ಅಧಿಕಾರಿ ಚನ್ನಕೇಶವ ರೆಡ್ಡಿ, ನಿವಾಸಿ ವೈದ್ಯಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಮಂಜುಳಾ ಮತ್ತಿತರರು ಇದ್ದರು.
ಪ್ರಮಾಣ ಪತ್ರ ವಿತರಣೆ: ಕರೊನಾ ಕಾಯಿಲೆಯ ನಿಯಂತ್ರಣ ಹಾಗೂ ಕರೊನಾ ಲಸಿಕಾಕರಣ ಅಭಿಯಾನದ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸಿದ ಮುದ್ದೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರಮಾಮಣಿ, ಮಂಡಿಕಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಸುಜಾತಾ ಹಾಗೂ ನಗರ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಮುನಿಯಮ್ಮಗೆ ಜಿಲ್ಲಾಧಿಕಾರಿಗಳು ಮೆಚ್ಚುಗೆಯ ಪ್ರಮಾಣ ಪತ್ರ ವಿತರಿಸಿದರು.
50,700 ಮಕ್ಕಳಿಗೆ ಗುರಿ: ಜಿಲ್ಲೆಯಲ್ಲಿ 12ರಿಂದ 14 ವರ್ಷದೊಳಗಿನ 50,700 ಮಕ್ಕಳಿಗೆ ಕೋರ್ಬಿವ್ಯಾಕ್ಸ್ ಲಸಿಕೆ ಹಾಕಿಸುವ ಗುರಿ ಹೊಂದಲಾಗಿದೆ. ಬುಧವಾರದಿಂದ ಜಿಲ್ಲೆಯ ಎಲ್ಲ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಹಾಗೂ ಶಾಲೆಗಳಲ್ಲಿ ಉಚಿತವಾಗಿ ಮೊದಲ ಡೋಸ್ ಲಸಿಕೆ ಹಾಕಲಾಗುತ್ತದೆ. ಹಾಗೆಯೇ 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಪಡೆದುಕೊಳ್ಳಬಹುದು. ಇದಕ್ಕೆ ಅರ್ಹ ಫಲಾನುಭವಿಗಳು ಲಸಿಕಾಕರಣ ಸ್ಲಾಟ್ ಗಳಿಗೆ ಅನುಗುಣವಾಗಿ ಕೋವಿನ್ ಪೋರ್ಟಲ್ ನೋಂದಣಿ ಮಾಡಿಸಿಕೊಳ್ಳಬೇಕು. ಇದೇ ವೇಳೆ ಎರಡನೇ ಡೋಸ್ ಲಸಿಕೆ ಪಡೆದು 9 ತಿಂಗಳು ಇಲ್ಲವೇ 39 ವಾರಗಳು ಪೂರೈಸಿದವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತದೆ. ಇದಕ್ಕೆ ಹೊಸಬರ ನೋಂದಣಿ ಇರುವುದಿಲ್ಲ.
ಸಾಧನೆಯ ಗುರಿ: ಜಿಲ್ಲೆಯಲ್ಲಿ 18 ವಷರ್ ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಹಾಕವುದರ ಪೈಕಿ ಮೊದಲನೇ ಡೋಸ್ ಶೇ.100 ಮತ್ತು ಎರಡನೇ ಡೋಸ್ ಶೇ.96 ರಷ್ಟು, 15ರಿಂದ 17 ವರ್ಷದೊಳಗಿನವರಿಗೆ ಸಂಬಂಧಿಸಿದಂತೆ ಲಸಿಕೆಯ ಮೊದಲನೇ ಡೋಸ್ ಶೇ.79 ಮತ್ತು ಎರಡನೇ ಡೋಸ್ ಶೇ.57 ರಷ್ಟು ಪ್ರಗತಿ ಸಾಧಿಸಲಾಗಿದೆ. ಲಸಿಕಾಕರಣ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.