ಜಿಲ್ಲೆ

ಲಸಿಕಾಕರಣ ಅಚ್ಚುಕಟ್ಟಾಗಿ ನಿರ್ವಹಿಸಿ: ಡಿಸಿ ಎಂ.ಸುಂದರೇಶ ಬಾಬು ಸೂಚನೆ

ಕೊಪ್ಪಳ: ಜಿಲ್ಲಾದ್ಯಂತ ಆ.7ರಿಂದ 12ವರೆಗೆ ಮಿಷಿನ್ ಇಂದ್ರಧನುಷ್ ಅಭಿಯಾನ ಹಮ್ಮಿಕೊಳ್ಳಲಿದ್ದು, ಅರ್ಹರಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅಧಿಕಾರಿಗಳಿಗೆ ಸೂಚಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.


ಲಸಿಕೆಯಿಂದ ವಂಚಿತ ಗರ್ಭಿಣಿ, ಮಕ್ಕಳನ್ನು ಗುರುತಿಸಿ. ಅವರಿಗೆ ಕಡ್ಡಾಯವಾಗಿ ಲಸಿಕೆ ನೀಡಿ. ಪ್ರಾಥಮಿಕ, ಸಮುದಾಯ, ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಸಮಸ್ಯಾತ್ಮಕ ಪ್ರದೇಶಗಳಾದ ಇಟ್ಟಂಗಿ ಭಟ್ಟಿ, ಕಟ್ಟಡ ಕಾರ್ಮಿಕರು, ತೋಟದ ಮನೆಗಳಲ್ಲಿ ವಾಸಿಸುವ ಫಲಾನುಭವಿಗಳನ್ನು ಗುರುತಿಸಿ ಲಸಿಕೆ ಹಾಕಿಸುವಂತೆ ಸೂಚಿಸಿದರು.


ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಾರ ಡಾ.ಶ್ರೀಧರ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ರುಬೆಲ್ಲಾ ಮತ್ತು ದಡಾರ ನಿರ್ಮೂಲಗೆ ಸಂಕಲ್ಪ ಮಾಡಲಾಗಿದೆ. ವಿವಿಧ ಇಲಾಖೆಗಳು ಲಸಿಕಾ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗರ್ಭಿಣಿ ಮತ್ತು 5 ವರ್ಷದೊಳಗಿನ ಮಕ್ಕಳ ಮಾಹಿತಿ ಹಂಚಿಕೊಳ್ಳಬೇಕು. ತಾಯಂದಿರ ಸಭೆಯಲ್ಲಿ ಅರಿವು ಮೂಡಿಸಿ. ಪಂಚಾಯತ್ ರಾಜ್ ಇಲಾಖೆಯಿಂದ ಕಸ ವಿಲೆವಾರಿ ವಾಹನಗಳಲ್ಲಿ ಜಿಂಗಲ್ಸ್ ಹಾಕಿ ಪ್ರಚಾರ ಮಾಡಿ. ಶಿಕ್ಷಣ ಇಲಾಖೆಯಿಂದ ಶಾಲಾ ಪ್ರಾರ್ಥನೆ ಸಮಯದಲ್ಲಿ ಘೋಷಣೆ ಮತ್ತು ಜಾಥ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.


ಮಿಷನ್ ಇಂದ್ರಧನುಷ್ ಅಭಿಯಾನ ಕಾರ್ಯಕ್ರಮ ಜಾಗೃತಿ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ ಎಂ.ಎಚ್., ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಪ್ರಕಾಶ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ವೆಂಕಟೇಶ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಶಶಿಧರ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ರಮೇಶ ಮೂಲಿಮನಿ, ತಜ್ಞ ವೈದ್ಯ ಡಾ.ಈಶ್ವರ ಸವಡಿ ಇತರರಿದ್ದರು.