ಜಿಲ್ಲೆ

ಲವ್ ಜಿಹಾದ್ ತಡೆಯಲು ಕಠಿಣ ಕಾನೂನು ರೂಪಿಸುವಂತೆ ಬಜರಂಗದಳ ಒತ್ತಾಯ

ಮಂಗಳೂರು: ಪ್ರೇಮದ ಮುಖವಾಡ ಧರಿಸಿ ನಿರಂತರ ನಡೆಯುತ್ತಿರುವ ಲವ್ ಜಿಹಾದ್ ತಡೆಯಲು ಕಠಿಣ ಕಾನೂನು ರೂಪಿಸುವಂತೆ ಬಜರಂಗದಳ ಸಂಘಟನೆಯು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಗುರುವಾರ ತೆರಳುತ್ತಿದ್ದ ಯುವ ಜೋಡಿಯನ್ನು ತಡೆದ ಸಂದರ್ಭ ಸಂಭವಿಸಿದ ಹಲ್ಲೆ ಮತ್ತು ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ಕೇಸುಗಳನ್ನು ಹಿಂಪಡೆಯುವಂತೆ ಬಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್. ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಲವ್ ಜಿಹಾದ್ ಪ್ರಕರಣಗಳು ನಡೆದಾಗ ಬಜರಂಗದಳ ಕಾರ್ಯಕರ್ತರು ತಡೆದು ಅವರನ್ನು ಪೊಲೀಸರಿಗೆ ಒಪ್ಪಿಸುವ ಕೆಲಸ ಮಾಡುತ್ತಾರೆ. ಆದರೆ ಸೇರಿರುವ ಸಾರ್ವಜನಿಕರು ಅವರ ಫೋಟೋ, ವೀಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಣಗಳಲ್ಲಿ ಹಾಕುತ್ತಾರೆ. ಘಟನೆಯಿಂದ ಆಕ್ರೋಶಕ್ಕೆ ಒಳಗಾಗುವ ಸಾರ್ವಜನಿಕರಲ್ಲಿ ಕೆಲವರು ತಪ್ಪಿತಸ್ಥರನ್ನು ಥಳಿಸುವ ಕೆಲಸ ಕೂಡ ಮಾಡುತ್ತಾರೆ. ಆದರೆ ಪೊಲೀಸ್ ಇಲಾಖೆಯು ಸತ್ಯಾಸತ್ಯತೆ ಪರಿಶೀಲಿಸದೆ ನಮ್ಮ ಸಂಘಟನೆ ಕಾರ್ಯಕರ್ತರು, ಮುಖಂಡರ ಮೇಲೆ ಕೇಸು ದಾಖಲಿಸಿಕೊಳ್ಳುತ್ತಿದೆ ಎಂದು ಅವರು ಆಕ್ಷೇಪಿಸಿದರು.

ಬಜರಂಗದಳ ಪ್ರಾಂತ ಸಹ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ ಶ್ರೀಧರ ತೆಂಕಿಲ ಮತ್ತು ಜಿಲ್ಲಾ ಸಾಪ್ತಾಹಿಕ್ ದೀಪಕ್ ಮರೋಳಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.