ಜಿಲ್ಲೆ

ಲದ್ದಿ ಹುಳು ಕಾಟಕ್ಕೆ ಕೃಷಿಕ ಹೈರಾಣ

ರಾಣೆಬೆನ್ನೂರ: ಅತಿವೃಷ್ಟಿಯಿಂದಾಗಿ ತಾಲೂಕಿನ ರೈತರು ಕಂಗಾಲಾಗಿದ್ದಾರೆ. ಈ ನಡುವೆ ಮೆಕ್ಕೆಜೋಳಕ್ಕೆ ಲದ್ದಿ ಹುಳು ಕಾಟ ಶುರುವಾಗಿರುವುದು ಬೆಳೆಗಾರರನ್ನು ಹೈರಾಣ ಮಾಡಿದೆ.

ತಾಲೂಕಿನ ಅಂಕಸಾಪುರ, ಬೇಲೂರು, ಮೇಡ್ಲೇರಿ ಮತ್ತಿತರ ಭಾಗಗಳಲ್ಲಿ ತೆನೆ ಕಟ್ಟುತ್ತಿರುವ ಮೆಕ್ಕೆಜೋಳ ಫಸಲಿಗೆ ಲದ್ದಿ ಹುಳು ಅಂಟಿಕೊಂಡಿದ್ದು, ಬೆಳೆ ನಾಶಪಡಿಸುತ್ತಿವೆ. ಸತತ ಮೂರು ವರ್ಷಗಳಿಂದ ಮೆಕ್ಕೆಜೋಳ ಬೆಳೆಗೆ ಈ ಬಾಧೆ ಕಾಡುತ್ತಿದೆ. ಈ ವರ್ಷ ಬೆಳೆ ಕೈಗೆ ಸಿಗಲಾರದೇನೋ ಎಂಬ ಕೊರಗು ರೈತರಲ್ಲಿದೆ. ನಷ್ಟದ ಕಾರಣಕ್ಕೆ ಹತ್ತಿ ಕೈಬಿಟ್ಟು ಮೆಕ್ಕೆಜೋಳ ಬೆಳೆಯಲು ಮುಂದಾಗಿದ್ದರೂ ರೈತರಿಗೆ ತೊಂದರೆ ಮುಂದುವರಿದಿದೆ.

ಸಂಜೆ, ರಾತ್ರಿ ಸಮಯದಲ್ಲಿ ಮೆಕ್ಕೆಜೋಳದ ಎಲೆಗಳ ಮೇಲೆ ಸಮರೋಪಾದಿಯಲ್ಲಿ ಈ ಹುಳುಗಳು ದಾಳಿ ಮಾಡುತ್ತವೆ. ಇವುಗಳ ನಿಯಂತ್ರಣ ರೈತರಿಗೆ ಸವಾಲಾಗಿದೆ. ಈಗಾಗಲೇ ಅನೇಕ ಗ್ರಾಮಗಳಲ್ಲಿ ಇವು ಕಾಣಿಸಿದ್ದು, ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಹರಡಬಹುದು ಎಂಬ ಆತಂಕ ರೈತರಲ್ಲಿದೆ.

ಆಸೆಗೆ ತಣ್ಣೀರು: ತಾಲೂಕಿನಲ್ಲಿ ಬಹುತೇಕ ರೈತರು ಹತ್ತಿ, ಸೂರ್ಯಕಾಂತಿ, ಶೇಂಗಾ ಕೈಬಿಟ್ಟು ಅಧಿಕ ಲಾಭ ತರುವ ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆದಿದ್ದಾರೆ. ಪ್ರಸಕ್ತ ವರ್ಷ 52,000 ಹೆಕ್ಟೇರ್​ಗೂ ಅಧಿಕ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಆರಂಭದಿಂದ ಈವರೆಗೆ ಉತ್ತಮ ಮಳೆಯಾಗಿರುವುದರಿಂದ ಬಲಿಷ್ಠವಾಗಿ ಬೆಳೆದಿದೆ. ತೆನೆ ಕೂಡ ಉತ್ತಮವಾಗಿ ಕಟ್ಟಿದೆ. ಹೀಗಾಗಿ, ರೈತರು ಈ ಬಾರಿ ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದರು. ಆದರೀಗ ಲದ್ದಿ ಹುಳುಗಳ ಕಾಟ ಶುರುವಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹತೋಟಿ ಹೇಗೆ?: ಲದ್ದಿ ಹುಳು ನಿಯಂತ್ರಣಕ್ಕೆ ಪ್ರತಿ ಹೆಕ್ಟೇರ್​ಗೆ 50 ಕೆ.ಜಿ. ಭತ್ತದ ತೌಡು, 5 ಕೆ.ಜಿ. ಬೆಲ್ಲ, 625 ಎಂ.ಎಲ್. ಮಾನೋಕ್ರೋಟೊಪಾಸ್, 10 ಲೀಟರ್ ನೀರು ತೆಗೆದುಕೊಳ್ಳಬೇಕು. ಬೆಲ್ಲವನ್ನು ನೀರಿನಲ್ಲಿ ಕರಗಿಸಬೇಕು. ಮಾನೋಕ್ರೋಟೊಪಾಸ್ ಔಷಧ, ಭತ್ತದ ತೌಡನ್ನು ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ರಾತ್ರಿಯಿಡೀ ಕಳೆಯಲು ಬಿಡಬೇಕು. ಮರುದಿನ ಸಂಜೆ 5ಕ್ಕೆ ಕೈಗವಸು ಧರಿಸಿ ಮಿಶ್ರಣ ಮಾಡಿದ ಔಷಧವನ್ನು ಬೆಳೆಗಳಿಗೆ ಸಿಂಪಡಿಸಬೇಕು. ಜತೆಗೆ, ಜಮೀನಿನಿಂದ ಮತ್ತೊಂದು ಜಮೀನಿಗೆ ಹುಳು ಬಾರದಂತೆ ತಡೆಯಲು ಬದುವಿನಲ್ಲಿ 2 ಅಡಿ ಗುಂಡಿ ತೋಡಬೇಕು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ವಾರದಿಂದ ನಮ್ಮ ಭಾಗದಲ್ಲಿ ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳು ಅಂಟಿಕೊಂಡಿವೆ. ಸೂಕ್ತ ಔಷಧ ಸಿಂಪಡಿಸಿದರೂ ಹುಳುಗಳ ಕಾಟ ದೂರ ಮಾಡಲು ಸಾಧ್ಯವಾಗುತ್ತಿಲ್ಲ. ಫಸಲು ಸಂರಕ್ಷಣೆ ಮಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು.| ದಿಳ್ಳೆಪ್ಪ ಸತ್ಯಪ್ಪನವರ, ಅಂಕಸಾಪುರ ಗ್ರಾಮದ ರೈತಲದ್ದಿ ಹುಳುಗಳ ನಿಯಂತ್ರಣಕ್ಕಾಗಿ ಸಾಮೂಹಿಕ ಔಷಧ ಸಿಂಪಡಣೆಗೆ ಅಧಿಕ ಒತ್ತು ನೀಡಬೇಕಾಗುತ್ತದೆ. ರೈತರು ಕೃಷಿ ಇಲಾಖೆ ಮಾರ್ಗಸೂಚಿಯಂತೆ ಔಷಧ ಸಿಂಪಡಿಸಬೇಕು.| ಶಿವಾನಂದ ಹಾವೇರಿ, ಕೃಷಿ ತಾಂತ್ರಿಕ ಅಧಿಕಾರಿ