ಬೆಳಗಾವಿ: ಗಾನಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ ನಿಧನರಾಗಿರುವುದು ದೇಶಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಗಾನ ಸರಸ್ವತಿಯಾಗಿದ್ದ ಲತಾಜಿ, ದೇಶದ ಸಂಗೀತ ಕ್ಷೇತ್ರ ಶ್ರೀಮಂತಗೊಳಿಸಿದ್ದರು. ಚಲನಚಿತ್ರ ಮೊದಲುಗೊಂಡು ದೇಶಭಕ್ತಿ, ಭಜನೆ ಹಲವು ನೆಲೆಗಳಲ್ಲಿ ಅಪ್ರತಿಮ ಕೊಡುಗೆ ನೀಡಿದ್ದರು. ಅವರ ಗಾನಸುಧೆಯನ್ನು ಸವಿಯುವುದೇ ಒಂದು ಭಾಗ್ಯವಾಗಿತ್ತು.
ಪುಣೆ ಹಾಗೂ ಬೆಳಗಾವಿಗಳಲ್ಲಿ ಅವರ ಕಾರ್ಯಕ್ರಮದಲ್ಲ್ಲಿ ಪಾಲ್ಗೊಂಡ ನೆನಪು ಇಂದಿಗೂ ಚಿರಸ್ಮರಣೀಯ ಎಂದು ಸ್ಮರಿಸಿದ್ದಾರೆ.
ಭೌತಿಕವಾಗಿ ಲತಾ ಅವರು ಇಲ್ಲದಿದ್ದರೂ ಅವರು ಸಂಗೀತ ಸೇವೆಯಿಂದ ಅಜರಾಮರವಾಗಿ ಉಳಿದಿದ್ದಾರೆ. ತಮ್ಮ ಅದ್ಭುತ ಸಂಗೀತದಿಂದ ಜನತೆಯ ಹೃದಯದಲ್ಲಿ ದೇಶಾಭಿಮಾನ, ಸ್ಫೂರ್ತಿ ಆತ್ಮಸ್ಥೈರ್ಯ ತುಂಬಿದ ಕೀರ್ತಿ ಲತಾಜಿ ಅವರಿಗೆ ಸಲ್ಲುತ್ತದೆ. ಲೋಕ ಇರುವವರೆಗೆ ಲತಾಜಿ ಅವರು ಹಾಡಿನ ಮೂಲಕ ಜೀವಂತವಾಗಿರುತ್ತಾರೆ. ಅವರ ಅಗಲಿಕೆ ಸಂಗೀತದ ದೀಪ ಆರಿದಂತಾಗಿದೆ. ಭಗವಂತನು ಅವರ ದಿವ್ಯ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ವೈಯಕ್ತಿಕವಾಗಿ ಹಾಗೂ ಕೆಎಲ್‌ಇ ಸಂಸ್ಥೆಯ ಪರವಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ತೆಲಸಂಗದಲ್ಲಿ ಅಭಿಮಾನಿಗಳಿಂದ ಶ್ರದ್ಧಾಂಜಲಿ: ಲತಾ ಮಂಗೆಶ್ಕರ್ ಅವರ ಧ್ವನಿ, ಸ್ವರ ಮೋಡಿಗೆ ಜಗತ್ತೇ ತಲೆಬಾಗಿದ್ದು, ಅಂತಹ ಗಾನ ಕೋಗಿಲೆಯನ್ನು ಪಡೆದ ಭಾರತೀಯರು ಭಾಗ್ಯಶಾಲಿಗಳು ಎಂದು
ಡಾ.ಬಿ.ಎಸ್.ಕಾಮನ್ ಹೇಳಿದರು. ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಲತಾಜಿ ಅವರ ಸಾಧನೆ ಮತ್ತು ಪ್ರತಿಭೆ ಮುಂದಿನ ಪೀಳಿಗೆಗೆ ಮಾದರಿ ಎಂದರು. ಶ್ರೀಶೈಲ ಶೆಲ್ಲೆಪ್ಪಗೋಳ, ರಾಮು ನಿಡೋಣಿ, ಸಿದ್ದಲಿಂಗ ಮಾದರ, ಈಶ್ವರ ಉಂಡೋಡಿ, ಅಪ್ಪು ಜಮಾದರ, ರಂಜಾನ್ ಮೀರಾಗೋಳ, ಸುರೇಶ ಖೊಳಂಬಿ, ರಾಜು ಪರ್ನಾಕರ, ಆನಂದ ಥೈಕಾರ, ಬುರಾನ ಅರಟಾಳ, ಆಶೀಫ್ ಮುಜಾವರ, ಇಮ್ತಿಯಾಜ್ ಮುಜಾವರ್, ಸಿದ್ದರಾಯ ಕಳಸಗೊಂಡ ಇತರರು ಇದ್ದರು.
ಸಂಗೀತದ ಕಿರೀಟ ಕಳಚಿದೆ: ಸಂಗೀತ ಕ್ಷೇತ್ರದ ಸರಸ್ವತಿ, ಲತಾ ಮಂಗೇಶ್ಕರ್ ಅವರನ್ನು ಕಳೆದುಕೊಂಡಿದ್ದು ತುಂಬಲಾರದ ನಷ್ಟ. ಸಂಗೀತ ಲೋಕದ ಕಿರೀಟವೇ ಇಂದು ಕಳಚಿದಂತಾಗಿದೆ ಎಂದು ಸಂಗೀತ ನಿರ್ದೇಶಕ ಕೆ.ಕಲ್ಯಾಣ ಸಂತಾಪ ಸೂಚಿಸಿದರು. ಬೆಳಗಾವಿಯಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಲತಾ ಮಂಗೇಶ್ಕರ್ ಬಗ್ಗೆ ಮಾತನಾಡಲು ನನಗೆ ಅರ್ಹತೆ ಇಲ್ಲ. ಅವರ ಹಾಡುಗಳನ್ನು ಕೇಳಿಕೊಂಡು ಬೆಳೆದಿದ್ದೇವೆ. ಅವರ ಸಾವು ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟ. ಸಂಗೀತಕ್ಕೆ ಅವರು ಶಿಸ್ತು ತಂದುಕೊಟ್ಟಿದ್ದರು. ಅವರ ಒಂದೊಂದು
ಹಾಡುಗಳೂ ಔಷಧೀಯ ಗುಣ ಹೊಂದಿವೆ. ಅವರ ಹಾಡಿನ ಧ್ವನಿ ಕೇಳಿದರೆ ಮನಸ್ಸು ಹಗುರವಾಗುತ್ತದೆ. ಇಡೀ ಸಮಾಜಕ್ಕೆ ಸ್ವಾಸ್ಥ್ಯ ಕೊಡುವ
ಅದ್ಭುತ ಧ್ವನಿ ಅವರದಾಗಿತ್ತು ಎಂದರು.