ಇಂಡಿ: ಲಖನೌದಲ್ಲಿ ಹುತಾತ್ಮರಾದ ತಾಲೂಕಿನ ಖೇಡಗಿ ಗ್ರಾಮದ ಯೋಧ ಪ್ರಕಾಶ ಶಿರಶ್ಯಾಡ ಅಂತ್ಯಕ್ರಿಯೆ ಖೇಡಗಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಮಂಗಳವಾರ ನೆರವೇರಿತು.
ಬೆಳಗ್ಗೆ 10ಕ್ಕೆ ಹೈದ್ರಾಬಾದ್ ಮೂಲಕ ಗ್ರಾಮಕ್ಕೆ ಆಗಮಿಸಿದ ಯೋಧ ಪ್ರಕಾಶ ಶಿರಶ್ಯಾಡ ಮೃತದೇಹವನ್ನು ವಿಜಯಪುರದ ಸೈನಿಕ ಶಾಲೆಯಿಂದ ಅಲಂಕೃತ ಮಿಲಿಟರಿ ವಾಹನದಲ್ಲಿ ಮೆರವಣಿಗೆ ಮೂಲಕ ತಂದು ಬಸವರಾಜೇಂದ್ರ ಪ್ರೌಢಶಾಲೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಪೊಲೀಸ್ ಇಲಾಖೆ ಮತ್ತು ಮಿಲಿಟರಿ ವತಿಯಿಂದ ಕುಶಾಲ ತೋಪು ಹಾರಿಸಿ ಅಂತಿಮ ಗೌರವ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಪ್ರಕಾಶ ಶಿರಶ್ಯಾಡ ಅಮರ ರಹೇ, ಭಾರತ ಮಾತಾ ಕಿ ಜೈ ಘೋಷಣೆಗಳನ್ನು ಜನರು ಕೂಗಿದರು. ಖೇಡಗಿಯ ಶಿವಬಸವರಾಜೇಂದ್ರ ಶ್ರೀಗಳು, ಶಾಸಕ ಯಶವಂತರಾಯಗೌಡ ಪಾಟೀಲ, ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ತಹಸೀಲ್ದಾರ್ ಬಿ.ಎಸ್. ಕಡಕಬಾವಿ, ಇಒ ಸುನೀಲ ಮದ್ದಿನ, ಗ್ರಾಮದ ಮುಖಂಡ ಅನೀಲ ಜಮಾದಾರ, ಗ್ರಾಪಂ ಸದಸ್ಯ ಶಿವುಗೌಡ ಲಕ್ಕೊಂಡ, ಪಿಕೆಪಿಎಸ್ ಸದಸ್ಯ ಎಂ.ಕೆ. ಶಿರಶ್ಯಾಡ, ರಾಜಶೇಖರ ಧೂಮಗೌಂಡ, ಎಚ್.ಎಸ್. ಗುನ್ನಾಪುರ ಇತರರು ಪಾಲ್ಗೊಂಡಿದ್ದರು.
ತಂದೆ ನೀಲಪ್ಪ, ತಾಯಿ ರುಕಮಾಬಾಯಿ, ಪತ್ನಿ ಕವಿತಾ ಮಕ್ಕಳಾದ ಪ್ರತಿಕ್ಷಾ, ಪ್ರಗತಿ, ಸಹೋದರ ಸಂತೋಷ ಸೇರಿ ಗ್ರಾಮಸ್ಥರ ದುಃಖ ಮುಗಿಲು ಮುಟ್ಟಿತ್ತು.