ನೆಲಮಂಗಲ: ನಗರದ ವೀವರ್ಸ್ ಕಾಲನಿಯ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯದ 6ನೇ ವಾರ್ಷಿಕೋತ್ಸವ ಹಾಗೂ ಲೋಕಕಲ್ಯಾಣಾರ್ಥ ಆಯೋಜಿಸಿದ್ದ ಶ್ರೀಲಕ್ಷ್ಮೀ ಶ್ರೀನಿವಾಸ ದೇವರ ಕಲ್ಯಾಣೋತ್ಸವ ವಿಜೃಂಭಣೆಯಿಂದ ನೆರವೇರಿತು.
ದೇಗುಲದ ಮಹಾಗಣಪತಿ, ಲಕ್ಷ್ಮೀ ಸಮೇತ ವೆಂಕಟೇಶ್ವರ ಸ್ವಾಮಿ ಮತ್ತು ವೈನತೇಯ ಸ್ವಾಮಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಪಾರ ಭಕ್ತರು ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡಿದ್ದರು. ಆಕರ್ಷಕ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ಭಕ್ತರು ವಿಶೇಷ ಪೂಜಾಕೈಂಕರ್ಯ ನೆರವೇರಿಸಿದರು. ದೇವಾಲಯ ಸಮಿತಿ ಅನ್ನದಾಸೋಹದ ವ್ಯವಸ್ಥೆ ಮಾಡಿತ್ತು.
ವಿವಿಧ ಕಾರ್ಯಕ್ರಮಗಳು: ವಾರ್ಷಿಕೋತ್ಸವದ ಪ್ರಯುಕ್ತ 2 ದಿನ ವಿವಿಧ ಧಾರ್ಮಿಕ ಕಾರ್ಯ ನೆರವೇರಿಸಲಾಯಿತು. ಸೋಮವಾರ ದೇವಾಲಯದ ವೆಂಕಟೇಶ್ವರಸ್ವಾಮಿ, ಪದ್ಮಾವತಿ ಸೇರಿ ಮಹಾಗಣಪತಿ ದೇವರಿಗೆ ಅಭಿಷೇಕ ನೆರವೇರಿಸಿ, ಮಹಾಗಣಪತಿ ಹೋಮ ಪೂರ್ಣಾಹುತಿ ನೀಡಲಾಯಿತು. ನಂತರ ಉತ್ಸವ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಕಲ್ಯಾಣೋತ್ಸವ ಮತ್ತು ಸಂಜೆ ನಗರದ ಮುಖ್ಯರಸ್ತೆಯಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ಮಾಡಲಾಯಿತು.
ದೇವಾಲಯ ಸಮಿತಿ ಅಧ್ಯಕ್ಷ ಎಂ. ನಾರಾಯಣ್, ಪ್ರಧಾನ ಕಾರ್ಯದರ್ಶಿ ನಾರಾಯಣ್‌ರಾವ್, ಸಹಕಾರ್ಯದರ್ಶಿ ಎನ್, ಗಣೇಶ್, ಖಜಾಂಜಿ ಆಂಜಿನಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ಡಿ. ಹೇಮಮೂರ್ತಿ, ಎನ್. ಸುರೇಶ್, ಎಂ. ಗಂಗರಾಜು, ಬಡಾವಣೆ ರಮೇಶ್, ಚಂದ್ರಕುಮಾರ್, ನಂದಕುಮಾರ್, ಪ್ರಕಾಶ್, ಬಾಬುರಾವ್, ಇಂಜಿನಿಯರ್ ಮಹೇಶ್, ಶ್ರೀನಿವಾಸ್, ಕಸಾಪ ಅದ್ಯಕ್ಷ ಕೇಶವಮೂರ್ತಿ, ವೆಂಕಟೇಶ್, ಆಗಮಿಕ ಶ್ರೀಧರಸ್ವಾಮಿ ಮತ್ತಿತರರು ಇದ್ದರು.