ಪಾಂಡವಪುರ: ತಾಲೂಕಿನ ಲಕ್ಷ್ಮೀ ಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ರೈತ ಸಂಘ-ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಗಳಾದ ಚಂದ್ರಿಕಾ ಹಾಗೂ ಕೆಂಪೇಗೌಡ ಚುನಾಯಿತರಾದರು.
ಒಟ್ಟು 18 ಸದಸ್ಯರ ಬಲ ಇರುವ ಗ್ರಾಪಂನ ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಬಿ)ಕ್ಕೆ ಮೀಸಲಾಗಿತ್ತು. ಬುಧವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ರೈತ ಸಂಘ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳಾಗಿ ಚಂದ್ರಿಕಾ ಮತ್ತು ಕೆಂಪೇಗೌಡ ಹಾಗೂ ಜೆಡಿಎಸ್ ಬೆಂಬಲಿತರಾಗಿ ಉಮಾ ಮತ್ತು ನರಸಿಂಹೇಗೌಡ ಕ್ರಮವಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು. ಬಳಿಕ ನಡೆದ ಚುನಾವಾಣೆ ಪ್ರಕ್ರಿಯೆಯಲ್ಲಿ ಚಂದ್ರಿಕಾ (12) ತಮ್ಮ ಪ್ರತಿಸ್ಪರ್ಧಿ ಉಮಾ (6) ವಿರುದ್ಧ 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆಂಪೇಗೌಡ (11) ತಮ್ಮ ಪ್ರತಿಸ್ಪರ್ಧಿ ನರಸಿಂಹೇಗೌಡ (7) ವಿರುದ್ಧ 4 ಮತಗಳ ಅಂತರದಲ್ಲಿ ಜಯ ಸಾಧಿಸಿದರು. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಜಿಪಂ ಎಇ ರೇವಣ್ಣ ಇಬ್ಬರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಕಾಂಗ್ರೆಸ್ ಮುಖಂಡರಾದ ಎಚ್.ಮಂಜುನಾಥ್, ಮಹದೇಶ್ವರಪುರ ದೇವರಾಜು ಅಭಿನಂದಿಸಿದರು. ರೈತ ಸಂಘ, ಕಾಂಗ್ರೆಸ್ ಮುಖಂಡರಾದ ರಂಗಸ್ವಾಮಿ, ದೇವರಾಜು, ಎಲ್.ಬಿ.ರವಿ, ಪುಟ್ಟರಾಜು, ರಾಜು, ಸುಧಾಕರ, ತಿಮ್ಮೇಗೌಡ, ಧನಪಾಲ್, ಮಂಜು ಇತರರು ಇದ್ದರು.