ಇನೋಸಿಸ್ ಒಡತಿ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾದ ಬಳಿಕ ಶುಕ್ರವಾರ ತಮ್ಮ ಮನೆಯ ದೇವರಾದ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಭೇಟಿ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಂದರು. ಈ ವೇಳೆ ಸುಧಮ್ಮ ಅವರ ಸಂಬಂಧಿಕರು ಇದ್ದರು. 
ಜಿಲ್ಲೆ

ಲಕ್ಷ್ಮೀ ನರಸಿಂಹ ದೇಗುಲಕ್ಕೆ ಸುಧಾಮೂರ್ತಿ ದರ್ಶನ

ಬಾಗಲಕೋಟೆ: ಕೇಂದ್ರ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಬಾಗಲಕೋಟೆ ಜಿಲ್ಲೆಯ ಮೂಲದ ಇನೋಸಿಸ್ ಒಡತಿ ಸೂಧಾಮೂರ್ತಿ ಅವರು ಶುಕ್ರವಾರ ತಮ್ಮ ಮನೆ ದೇವರು ಜಮಖಂಡಿ ತಾಲೂಕಿನ ಶೂರ್ಪಾಲಿ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಭೇಟಿ ಮಾಡಿದರು.
ಪದ್ಮಭೂಷಣ ಪ್ರಶಸ್ತಿ ಘೋಷಣೆ ಆದ ಸಂದರ್ಭದಲ್ಲಿ ಜಮಖಂಡಿ ನಗರದಲ್ಲಿ ಇದ್ದ ಸುಧಾಮೂರ್ತಿ ಅವರು ಗುರುವಾರ ಪೂರ್ವನಿಗದಿತ ಪಂಡರಾಪುರಕ್ಕೆ ಹೋಗಿದ್ದರು. ಶುಕ್ರವಾರ ಜಮಖಂಡಿ ತಾಲೂಕಿನ ಶೂರ್ಪಾಲಿ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನದಲ್ಲಿ ಲಕ್ಷ್ಮೀ ನರಸಿಂಹ ದೇವರಿಗೆ ಪಂಚಾಮೃತ ಅಭಿಷೇಕ, ಮಹಾನೈವೇಧ್ಯ ಸಲ್ಲಿಸಿ ಪ್ರಸಾದ ತೆಗೆದುಕೊಂಡರು. ಶ್ರೀಸಾಮಾನ್ಯ ಭಕ್ತರಂತೆ ಅಭಿಷೇಕದ ಬಳಿಕ ದೇವಸ್ಥಾನದ ಆವರಣದಲ್ಲಿ ಕುಳಿತು ವಿಶ್ರಾಂತಿ ಪಡೆದುಕೊಂಡರು.
ಪದ್ಮಭೂಷಣ ಪ್ರಶಸ್ತಿ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ವಿಜಯವಾಣಿಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸುಧಾಮೂರ್ತಿ ಅವರು, ವಿಜಯವಾಣಿ ಓದುಗರಿಗೆ ಶುಭಾಷಯ ತಿಳಿಸಿ, ವಿಆರ್‌ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರಿಗೆ ಹಾರ್ದಿಕ ಶುಭಾಶಯ ತಿಳಿಸಿದರು.
ಶೂರ್ಪಾಲಿಯ ಲಕ್ಷ್ಮೀ ನರಸಿಂಹ ನಮ್ಮ ಮನೆಯ ದೇವರು. ಹೀಗಾಗಿ ಇವತ್ತು ಇಲ್ಲಿಗೆ ಬಂದಿದ್ದೇನೆ. ನನಗೆ ಆಕಸ್ಮಿಕವಾಗಿ ಪದ್ಮಭೂಷಣ ಪ್ರಶಸ್ತಿ ಸಿಕ್ಕಾಗ ಬಹಳ ಸಂತೋಷ ಆಯಿತು. ಅದಕ್ಕಾಗಿ ನಾನು ಪ್ರಯತ್ನಪಟ್ಟಿರಲಿಲ್ಲ, ನನಗೆ ಅದರ ಬಗ್ಗೆ ಗೊತ್ತೂ ಇರಲಿಲ್ಲ. ನನಗೆ ಈ ಪ್ರಶಸ್ತಿ ಕೊಟ್ಟ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ವೇಳೆ ದೇವಸ್ಥಾನದ ಅರ್ಚಕರಾದ ಪ್ರಲ್ಹಾದ ಕುಲಕರ್ಣಿ, ಪದ್ಮಾ ಕುಲಕರ್ಣಿ, ನಾರಾಯಣ ಕುಲಕರ್ಣಿ, ಸುಧಾ ಅರಬಟ್ಟಿ, ಪರಿಮಳ ಮಡ್ಡಿ, ಪ್ರಮೋದ ಗಲಗಲಿ, ಭೀಮಸೇನ ಕುಲಕರ್ಣಿ ಉಪಸ್ಥಿತರಿದ್ದರು.