ಭದ್ರಾವತಿ: ಪಿತೃಪಕ್ಷದ ಅಂಗವಾಗಿ ಮಾಡುವ ಹಿರಿಯರ ಪೂಜೆಗಳನ್ನು ನಿಲ್ಲಿಸಿ. ಅದರ ಖರ್ಚಿನಲ್ಲಿ ಒಂದು ಮಗುವಿಗೆ ಶಿಕ್ಷಣ ನೀಡಿ ಎಂದು ಶ್ರೀಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕನಕ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕುರುಬ ಸಮಾಜದಲ್ಲಿ ಮೌಢ್ಯದ ಆಚರಣೆಗಳಿಗೆ ಮಾಡುವ ದುಂದುವೆಚ್ಚ ಹೆಚ್ಚಾಗಿದೆ. ದೇವರು ಮತ್ತು ಹಿರಿಯರ ಹೆಸರು, ಇಲ್ಲಸಲ್ಲದ ಹಬ್ಬಗಳ ಹೆಸರಿನಲ್ಲಿ ಲಕ್ಷಾಂತರ ರೂ. ವ್ಯಯಿಸುವ ಮೂಲಕ ಮೌಢ್ಯಕ್ಕೆ ಹೆಚ್ಚು ಒತ್ತು ಕೊಟ್ಟು ಮನೆತನ ಹಾಳುಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನನ್ನ ವಿರೋಧವಿದೆ. ಈ ರೀತಿ ಖರ್ಚು ಮಾಡುವ ಹಣದಲ್ಲಿ ಸಂಘ-ಸಂಸ್ಥೆಗಳನ್ನು ಕಟ್ಟಿ, ಹಣ ವಿನಿಯೋಗಿಸಿದರೆ ಆಪತ್ತು ನಿಧಿಯಾಗಿ ಅನುಕೂಲಕ್ಕೆ ಬರುತ್ತದೆ. ಕಷ್ಟಪಟ್ಟು ದುಡಿಯುವ ನೀವು ಹಣ ಉಳಿತಾಯ ಮಾಡಿದರೆ ಬೇರೆಯವರಂತೆ ನೀವೂ ಕಾರು ಕೊಳ್ಳಬಹುದು, ಮನೆಯ ಹೆಣ್ಣು ಮಕ್ಕಳಿಗೆ ಸೀರೆ ಉಡಿಸಬಹುದು ಎಂದರು.
ಹೊಸದುರ್ಗ ಭಾಗದಲ್ಲಿ 12 ವರ್ಷಕ್ಕೊಮ್ಮೆ 7 ದಿನ ದೇವಿಕೆರೆ ಬೀರಪ್ಪನ ಜಾತ್ರೆ ನಡೆಯುತ್ತದೆ. ಕಳೆದ ಬಾರಿ ನಡೆದ ಜಾತ್ರೆಗೆ 27 ಕೋಟಿ ರೂ. ಖರ್ಚು ಮಾಡಲಾಗಿದೆ. ಒಂದು ಬುಡಕಟ್ಟಿನ ಜನ 27 ಕೋಟಿ ರೂ. ಖರ್ಚು ಮಾಡುತ್ತಾರೆಂದರೆ, ತಿಂದುಂಡು ಮಾಡುವ ಬಾಯಿಚಟದ ಈ ಹಬ್ಬಕ್ಕೆ ಅರ್ಥವಿದೆಯೇ? ಇಂತಹ ಹಬ್ಬಗಳನ್ನು ಕೈಬಿಟ್ಟು ಸಮುದಾಯದ ಜನರು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸದೃಢರಾಗಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.
ಹಣಕಾಸಿನ ವ್ಯವಹಾರಗಳು ಪಾರದರ್ಶಕವಾಗಿ ಸಮಾಜಮುಖಿ ಆಗಿದ್ದಾಗ ಮಾತ್ರ ಸಂಘ-ಸಂಸ್ಥೆಗಳು ಉಜ್ಜಲವಾಗಿ ಬೆಳೆಯಲು ಸಾಧ್ಯ. ಬೇಡುವ ನಾಲಿಗೆಯಲ್ಲಿ ನಿಯತ್ತಿದ್ದರೆ ಕೊಡುವ ಕೈಗಳಿಗೆ ಕೊರತೆ ಇಲ್ಲ ಎನ್ನುವ ಕನಕದಾಸರ ಮಾತಿನಂತೆ ಸಂಘದ ನಿರ್ದೇಶಕರು, ಪದಾಧಿಕಾರಿಗಳು ಪ್ರಾಮಾಣಿಕವಾಗಿ ನಡೆದುಕೊಂಡಾಗ ಎಲ್ಲವೂ ತಾನಾಗೇ ಹರಿದುಬರುತ್ತದೆ .ಇಲ್ಲಿ ನಂಬಿಕೆ, ವಿಶ್ವಾಸ ಮುಖ್ಯವಾಗುತ್ತವೆ ಎಂದು ತಿಳಿಸಿದರು.