ಜಿಲ್ಲೆ

ಲಕ್ಷಾಂತರ ರೂ. ಮೌಲ್ಯದ ಔಷಧ ನೀರು ಪಾಲು

ಗದಗ: ಸತತ ಮಳೆಯಿಂದಾಗಿ ಮಲ್ಲಸಮುದ್ರದ ಬಳಿಯ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್್ಸ) ಆಸ್ಪತ್ರೆಯ ನೆಲಮಹಡಿಯಲ್ಲಿರುವ ಔಷಧ ಗೋದಾಮಿಗೆ (ಡ್ರಗ್ ಸ್ಟೋರ್) ನೀರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಔಷಧ ಹಾಗೂ ವೈದ್ಯಕೀಯ ಉಪಕರಣಗಳು ನೀರು ಪಾಲಾಗಿವೆ.
ತಾಲೂಕಿನ ನಾಗಾವಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಬಿದ್ದ ಬಗ್ಗೆ ವರದಿಯಾಗಿದೆ. ಕಪ್ಪತಗುಡ್ಡದ ಸೆರಗಿನಲ್ಲಿರುವ ಆಸ್ಪತ್ರೆಗೆ ಸೋಮವಾರ ರಾತ್ರಿಯಿಂದಲೇ ಗುಡ್ದದಿಂದ ಹರಿದು ಬಂದ ನೀರು ಡ್ರಗ್ ಸ್ಟೋರ್​ಗೆ ನುಗ್ಗಿದೆ. ಗೋದಾಮಿನಲ್ಲಿ ಅಂದಾಜು ಎರಡು ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಸಿರಿಂಜ್, ಸ್ಯಾನಿಟೈಸರ್, ಮಾತ್ರೆ ತುಂಬಿದ ಡಬ್ಬ, ಸರ್ಜಿಕಲ್ ಗ್ಲೌಸ್, ಔಷಧ ಬಾಟಲಿಗಳು ನೀರು ಪಾಲಾಗಿವೆ.
ಮಂಗಳವಾರದಿಂದಲೇ ನೀರನ್ನು ಹೊರ ಹಾಕಲು ಪ್ರಯತ್ನ ನಡೆಸಲಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಪಂಪ್​ಸೆಟ್ ಮೂಲಕ ನೀರು ಖಾಲಿ ಮಾಡಲು ಮುಂದಾಗಿದ್ದರು. ಆದರೆ, ಪ್ಲಾಸ್ಟಿಕ್​ನ ಚಿಕ್ಕ ವಸ್ತುಗಳು ಪಂಪ್​ಸೆಟ್ ಪೈಪ್​ಗೆ ಸಿಲುಕಿ ನೀರು ಎತ್ತುವುದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಜಿಮ್ಸ್ ಆಸ್ಪತ್ರೆಯ ನರ್ಸಿಂಗ್ ಸ್ಟಾಫ್, ಡ್ರಗ್ ಹೌಸ್ ಸಿಬ್ಬಂದಿಗಳೇ ಔಷಧಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಕಳೆದೆರಡು ದಿನಗಳಿಂದ ಸುರಿದ ಮಳೆ ಅವಳಿ ನಗರದಲ್ಲಿ ಭಾರಿ ಅವಾಂತರ ಸೃಷ್ಟಿಸಿದೆ. ಇದೀಗ ಆಸ್ಪತ್ರೆಯ ಲಕ್ಷಾಂತರ ರೂ. ಮೌಲ್ಯದ ಔಷಧ ಮತ್ತು ಇತರ ಉಪಕರಣಗಳು ನೀರು ಪಾಲಾಗಿರುವುದು ಮತ್ತೊಂದು ಸಮಸ್ಯೆ ತಲೆದೋರಿದಂತಾಗಿದೆ. ಔಷಧ ಕೊರತೆ ಎದುರಾಗುವ ಸಾಧ್ಯತೆ ಇದೆ.
ಮೇಲಧಿಕಾರಿಗಳ ಗಮನಕ್ಕೆ: ಡ್ರಗ್ ಸ್ಟೋರ್​ಗೆ ನೀರು ನುಗ್ಗಿರುವ ವಿಷಯ ತಿಳಿದ ಮೇಲೆ ಜಿಮ್್ಸ ನಿರ್ದೇಶಕಿ ಡಾ.ರೇಖಾ ಸೋನಾವನೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ‘ಡ್ರಗ್ ಸ್ಟೋರ್​ಗೆ ನೀರು ನುಗ್ಗಿರá-ವ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಪ್ಲಾಸ್ಟಿಕ್ ಕೋಟೆಡ್ ಇರುವುದರಿಂದ ಮಾತ್ರೆಗಳು, ಔಷಧ ಬಾಟಲ್ ಗಳು ಹಾಳಾಗುವುದಿಲ್ಲ. ಇದರಲ್ಲಿ ಶೇ.90ರಷ್ಟು ಔಷಧವನ್ನು ಬಳಕೆ ಮಾಡಿಕೊಳ್ಳಲಾಗುವುದು’ ಎಂದರು.
ಸ್ಥಳಾಂತರಕ್ಕೆ ಶಿಫಾರಸು: ಆಸ್ಪತ್ರೆ ನೆಲಮಹಡಿ ಇತ್ತೀಚೆಗೆ ಸೋರುತ್ತಿದೆ. ಮಳೆ ಬಂದಾಗ ಸಣ್ಣಮಟ್ಟದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಮುಖ್ಯ ಮತ್ತು ಉಪ ಗೋದಾಮುಗಳನ್ನು ಸ್ಥಳಾಂತರ ಮಾಡಬೇಕೆಂದು ಗೋದಾಮಿನ ಅಧಿಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ, ಸ್ಥಳಾಂತರ ಕುರಿತು ನಿರ್ಣಯ ಕೈಗೊಳ್ಳದಿರುವುದರಿಂದ ಅವಾಂತರಕ್ಕೆ ಕಾರಣವಾಗಿದೆ ಎಂದು ಗೊತ್ತಾಗಿದೆ.