ಚಿಕ್ಕಮಗಳೂರು ತಾಲೂಕಿನ ಲಕ್ಯಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಿ.ಎಂ ಕೃಷ್ಣೇಗೌಡ, ಉಪಾಧ್ಯಕ್ಷರಾಗಿ ಜಯಣ್ಣ ಆಯ್ಕೆಯಾಗಿದ್ದು, ಅವರನ್ನು ಕಾಂಗ್ರೆಸ್ ಮುಖಂಡರು ಹಾಗೂ ಸಹಕಾರ ಸಂಘದ ನಿರ್ದೇಶಕರು ಅಭಿನಂದಿಸಿದರು. 
ಜಿಲ್ಲೆ

ಲಕ್ಯಾ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಡಿ.ಎಂ.ಕೃಷ್ಣೇಗೌಡ ಆಯ್ಕೆ

ಚಿಕ್ಕಮಗಳೂರು: ತಾಲೂಕಿನ ಲಕ್ಯಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಿ.ಎಂ ಕೃಷ್ಣೇಗೌಡ, ಉಪಾಧ್ಯಕ್ಷರಾಗಿ ಜಯಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಲೂಕಿನ ಲಕ್ಯಾದ ಸಹಕಾರ ಸಂಘದ ಆವರಣದಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಜೊತೆಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಸಹಕಾರ ಸಂಘದಲ್ಲಿ ರಾಜಕೀಯ ಬೆರಸದೆ ಎಲ್ಲರು ಒಗ್ಗಟ್ಟಿನಿಂದ ರೈತರ ಸೇವೆ ಮಾಡಲು ಶ್ರಮಿಸಬೇಕು. ಸರ್ಕಾರದಿಂದ ದೊರೆಯುವ ಅನುದಾನವನ್ನು ಪಡೆದು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯ ನೀಡಲು ಮುಂದಾಗಬೇಕು ಎಂದು ತಿಳಿಸಿದರು.

ಸಹಕಾರ ಸಂಘದಲ್ಲಿ ಸರ್ವರನ್ನು ವಿಶ್ವಾಸಕ್ಕೆ ಪಡೆದು ಜನಪರ ಆಡಳಿತ ಕೊಡಲು ಮುಂದಾಗಬೇಕು. ಕೆಲವರು ವೈಯಕ್ತಿಕ ವಿಚಾರದಲ್ಲಿ ರಾಜಕೀಯ ದ್ವೇಷ ನೆಡೆಸುವುದರಿಂದ ಸಹಕಾರ ಸಂಘಗಳು ನಾಶವಾಗುತ್ತವೆ ಎಂದು ಎಚ್ಚರಿಸಿದರು.

ಲಕ್ಯಾ ಜಿಲ್ಲಾ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡಿ.ಎಚ್.ಮರೀಗೌಡರು ಈ ಭಾಗದಲ್ಲಿ ಜನಪರ ಕೆಲಸ ಮಾಡುವ ಮೂಲಕ ಜನ ಮಾನಸದಲ್ಲಿ ಉಳಿದಿದ್ದಾರೆ. ಇಂದು ಅವರ ಪುತ್ರ ಡಿ.ಎಂ.ಕೃಷ್ಣೇಗೌಡ ಸಹಕಾರ ಸಂಘದ ಅಧ್ಯಕ್ಷರಾಗಿದ್ದು ತಂದೆಯವರಷ್ಟೇ ಹೆಸರು ಸಂಪಾದಿಸುವ ನಿಟ್ಟಿನಲ್ಲಿ ಜನಪರ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಸಹಕಾರ ಸಚಿವ ರಾಜಣ್ಣ ನೇರವಾಗಿ ರೈತರಿಗೆ ನೆರವಾಗಲು ಸಾಲ ಸೌಲಭ್ಯ ನೀಡಲು ಮುಂದಾಗಿದ್ದಾರೆ. ಶಾಸಕ ಎಚ್.ಡಿ.ತಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ ಮಾಡುವಂತೆ ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.

ಅಧಿಕಾರ ಶಾಶ್ವತವಲ್ಲ. ಸಿಕ್ಕಿರುವ ಅವಧಿಯಲ್ಲಿ ಜನಪರ ಕಾರ್ಯ ಕೈಗೊಳ್ಳಬೇಕು. ಮುಂದಿನ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷದ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಕಿವಿಮಾತು ಹೇಳಿದರು.

ನೂತನ ಅಧ್ಯಕ್ಷ ಡಿ.ಎಂ.ಕೃಷ್ಣೇಗೌಡ ಮಾತನಾಡಿ, ನಮ್ಮನ್ನು ಆಯ್ಕೆಮಾಡಿರುವ ಎಲ್ಲ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಪ್ರಾಮಾಣಿಕವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಬಸವರಾಜು, ಕೃಷ್ಣಶೆಟ್ಟಿ, ಜಗದೀಶ್, ಮರಿಗೌಡ, ಈಶ್ವರಯ್ಯ, ಗೋಪಾಲಸ್ವಾಮಿ, ಲೋಲಾಕ್ಷಿ, ನಾಗರತ್ನಮ್ಮ, ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡರಾದ ಭರತೇಶ್, ಸಿz್ದೆÃಶ್, ಶಶಿಕುಮಾರ್, ಮೊಹಮ್ಮದ್ ಹನೀಫ್, ನಾಗಣ್ಣ, ಪ್ರಕಾಶ್ ರೈ, ಕಾಂತರಾಜ್, ರಾಮೇಗೌಡ, ಲಕ್ಕೇಗೌಡ, ಮಲ್ಲೇಗೌಡ, ಮಲ್ಲಿಕಾರ್ಜುನ, ನಾಗೇಶ್, ಲಕ್ಯಾ ಜಗದೀಶ್ ಮತ್ತಿತರರಿದ್ದರು.