ಜಿಲ್ಲೆ

ಲಕ್ಕುಂಡಿ ಉತ್ಸವ ಮಾ.14ರಿಂದ

ಗದಗ: ಮಾ. 14 ಮತ್ತು 15ರಂದು ಲಕ್ಕುಂಡಿ ಉತ್ಸವ ಏರ್ಪಡಿಸಲಾಗಿದ್ದು, ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಿದ್ದ ಲಕ್ಕುಂಡಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಬ್ಯಾನರ್ ಮುಕ್ತ ಲಕ್ಕುಂಡಿ ಉತ್ಸವ ಆಚರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಸೂಚಿಸಿದ್ದಾರೆ. ಸಮಿತಿಗಳ ಮೂಲಕ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.

ಜಿಲ್ಲೆಯ ಹಾಗೂ ಸುತ್ತ ಮುತ್ತಲಿನ ಭಾಗಗಳಿಂದ ಜನ ಉತ್ಸವಕ್ಕೆ ಆಗಮಿಸುವುದರಿಂದ ಗ್ರಾಮದ ರಸ್ತೆ, ಚರಂಡಿ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಹಾಕಬೇಕು. ಧೂಳು ಏಳದಂತೆ ರಸ್ತೆಗಳಿಗೆ ನೀರು ಸಿಂಪಡಿಸಬೇಕು ಎಂದು ನಿರ್ದೇಶನ ನೀಡಿದರು.

ಗ್ರಾಮದಲ್ಲಿ ಬೀದಿ ದೀಪಗಳು ಸಮರ್ಪಕವಾಗಿರಬೇಕು. ಹಸಿರು ಬಣ್ಣಕ್ಕೆ ತಿರುಗಿರುವ ಮುಸುಕಿನ ಬಾವಿಯ ನೀರನ್ನು ಹೊರಹಾಕಿ ಹೊಸ ನೀರು ತುಂಬಿಸಬೇಕು ಎಂದರು.

ವಿವಿಧ ಇಲಾಖೆಗಳ ಸಾಧನೆ ಕುರಿತು ಚಿತ್ರ ಪ್ರದರ್ಶನವಿರಲಿ. ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಅತ್ಯಾಕರ್ಷಣೀಯ ಕಲೆ ಪ್ರದರ್ಶಿಸಿದ ತಂಡಗಳನ್ನು ಉತ್ಸವಕ್ಕೆ ಆಹ್ವಾನಿಸಬೇಕು. ಸ್ಥಳೀಯ ಕಲಾವಿದರ ಜತೆಗೆ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕಲಾವಿದರನ್ನು ಆಹ್ವಾನಿಸುವುದು. ಉತ್ಸವದ ಮುನ್ನಾ ದಿನ ಲಗೋರಿ, ಚಿನ್ನಿದಾಂಡು ಮುಂತಾದ ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸಲು ಸಭೆಯಲ್ಲಿ ತೀರ್ವನಿಸಲಾಯಿತು.

ಉತ್ಸವದ ಅಂಗವಾಗಿ ವಿಶೇಷ ಸಿಡಿಮದ್ದು ಪ್ರದರ್ಶನ, ಉತ್ಸವದ ಲಾಂಛನ, ಆಹ್ವಾನ ಪತ್ರಿಕೆ, ರ್ಪಾಂಗ್ ವ್ಯವಸ್ಥೆ, ವಿಚಾರಗೋಷ್ಠಿ, ಸಾರಿಗೆ, ವಸತಿ, ಪ್ರಚಾರ, ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ, ಕೆರೆಗಳಲ್ಲಿ ದೋಣಿ ವಿಹಾರ, ತುರ್ತು ವೈದ್ಯಕೀಯ ತಂಡ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವುದು ಹಾಗೂ ಸಮಿತಿಗಳ ರಚನೆ ಕುರಿತು ಸಭೆಯಲ್ಲಿ ರ್ಚಚಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ.ಎನ್, ಜಿಪಂ ಸಿಇಒ ಡಾ.ಆನಂದ್ ಕೆ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ, ವಿವಿಧ ಇಲಾಖೆಯ ಜಿಲ್ಲಾ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

EndFragment