ಗದಗ: ಲಕ್ಕುಂಡಿ ಉತ್ಸವ ಮಾ. 21 ಹಾಗೂ 22ರಂದು ನಡೆಯಲಿದ್ದು, ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಲಕ್ಕುಂಡಿ ಗ್ರಾಮದ ಹಿರಿಯರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಉತ್ಸವವನ್ನು ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಿದ್ದ ಲಕ್ಕುಂಡಿ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಚಿವರಾದ ಸಿ.ಟಿ.ರವಿ, ಜಗದೀಶ ಶೆಟ್ಟರ್ ಉತ್ಸವದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹಾಗೂ ರಾಜ್ಯ, ರಾಷ್ಟ್ರಮಟ್ಟದ ಕಲಾವಿದರಿಗೆ ಸೂಕ್ತ ಅವಕಾಶ ನೀಡಲಾಗುವುದು. ಸ್ಥಳೀಯ ಕಲಾವಿದರಲ್ಲಿ ಜಿಲ್ಲೆಯ ಹಾಗೂ ಲಕ್ಕುಂಡಿ ಗ್ರಾಮದ ಕಲಾವಿದರಿಗೆ ಸೂಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಲಕ್ಕುಂಡಿ ಉತ್ಸವಕ್ಕೆ ಆಗಮಿಸುವ ಖ್ಯಾತ ಕಲಾವಿದರಿಗೆ ವಸತಿ ಹಾಗೂ ಊಟೋಪಹಾರ ವ್ಯವಸ್ಥೆ ಮಾಡಬೇಕು. ಉತ್ಸವದ ಅಂಗವಾಗಿ ಮಾ. 20ರಂದು ಗಾಳಿಪಟದ ಸ್ಪರ್ಧೆ, ಮಾ. 21ರಂದು ಮಧ್ಯಾಹ್ನ ಜಾನಪದ ಕಲಾ ಮೆರವಣಿಗೆ, ಮಾ. 22ರಂದು ಬೆಳಗ್ಗೆ ಗ್ರಾಮೀಣ ಕ್ರೀಡೆಗಳನ್ನು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದರು.
ಉತ್ಸವದ ಸಂದರ್ಭದಲ್ಲಿ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ಬ್ಯಾನರ್ ಹಾಗೂ ಪ್ಲಾಸ್ಟಿಕ್ ಮುಕ್ತವಾಗಿಸಲು ತೀರ್ವನಿಸಲಾಗಿದೆ. ಲಕ್ಕುಂಡಿಯ ಹಿಂದಿನ ಉತ್ಸವಗಳ ಅನುಭವದ ಆಧಾರದ ಮೇಲೆ ಈ ಬಾರಿಯ ಉತ್ಸವ ಸಮಾಜಮುಖಿಯಾಗಿ ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಬೇಕೆಂಬುದು ತಮ್ಮ ಆಶಯ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಲಕ್ಕುಂಡಿ ಗ್ರಾಮದಲ್ಲಿ ಉತ್ಸವದ ಪೂರ್ವಭಾವಿ ಸಭೆ ನಡೆಸಲಾಗಿದೆ. ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಗ್ರಾಮೀಣ ಕ್ರೀಡೆಗಳು, ವಿಚಾರಗೋಷ್ಠಿ, ಕವಿಗೋಷ್ಠಿ ಸೇರಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲು ಅಗತ್ಯದ ಸಮಿತಿಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಮಾತನಾಡಿ, ಲಕ್ಕುಂಡಿ ಉತ್ಸವದ ವ್ಯವಸ್ಥಿತವಾಗಿ ಏರ್ಪಡಿಸಲು ಸ್ವಾಗತ, ಹಣಕಾಸು, ಪ್ರಚಾರ, ಪ್ರದರ್ಶನ, ಮೆರವಣಿಗೆ, ವಸತಿ, ಸಾರಿಗೆ ಸೇರಿ ಒಟ್ಟು 15 ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಉತ್ಸವದ ಸಂದರ್ಭದಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆ ಸಂಚಾರಿ ಆರೋಗ್ಯ ವೈದ್ಯಕೀಯ ಸೌಲಭ್ಯ ಒದಗಿಸಲು ಹಾಗೂ ಲಕ್ಕುಂಡಿ ಗ್ರಾಮ ಪಂಚಾಯತಿಯವರು ಇಡೀ ಗ್ರಾಮದ ಸ್ವಚ್ಛತಾ ಕಾರ್ಯಕ್ರಮ ಕೈಕೊಳ್ಳಬೇಕೆಂದು ಸಚಿವರು, ಅಧಿಕಾರಿಗಳು ಸೂಚಿಸಿದರು. ಇದೇ ಸಂದರ್ಭದಲ್ಲಿ ಲಕ್ಕುಂಡಿ ಉತ್ಸವದ ಲೋಗೋ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ವಿವಿಧ ಸಮಿತಿಗಳು ನಿರ್ವಹಿಸಬೇಕಾದ ಕಾರ್ಯಗಳ ಕುರಿತು ವಿಸõತ ಚರ್ಚೆ ನಡೆಯಿತು. ಜಿಪಂ ಸಿಇಒ ಡಾ.ಆನಂದ. ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
80 ಲಕ್ಷ ರೂ. ಅನುದಾನ
ಲಕ್ಕುಂಡಿ ಉತ್ಸವಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ. ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ 30 ಲಕ್ಷ ರೂ. ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳಲಾಗಿದೆ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ
ಸಚಿವರಿಗೆ ಭೂಕುಸಿತದ ಭಯ!
ಗದಗ: ನರಗುಂದದಲ್ಲಿ ಪದೇಪದೆ ಮತ್ತೆ ಭೂಕುಸಿತವಾಗಿದ್ದು, ಭೂಕುಸಿತ ಏತಕ್ಕಾಗಿ ಆಗುತ್ತಿವೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಭೂಕುಸಿತದಿಂದ ನರಗುಂದ ಜನರು ಭಯದಲ್ಲಿ ಇದ್ದಾರೆ. ಪಟ್ಟಣದಲ್ಲಿ ಸ್ಥಳ ಪರಿಶೀಲನೆಗೆ ಹೋಗಲೂ ಭಯವಾಗುತ್ತಿದೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಕುಸಿತಗಳ ಕುರಿತು ಗಣಿ ಇಲಾಖೆ ಹಿರಿಯ ವಿಜ್ಞಾನಿಗಳು ಹಾಗೂ ರಾಷ್ಟ್ರಮಟ್ಟದ ವಿಜ್ಞಾನಿ ಎಚ್ಎಸ್ಎಂ ಪ್ರಕಾಶ ಅವರು ಪರಿಶೀಲನೆ ನಡೆಸಿದ್ದಾರೆ. ಅವರಿಗೂ ಕೂಡ ಕುಸಿತದ ಕುರಿತು ನಿಖರ ಉತ್ತರ ಸಿಕ್ಕಿಲ್ಲ. ಈ ಕುರಿತು ಸಿಎಂ ಯಡಿಯೂರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಮಾತನಾಡಬೇಕಿದೆ. ಜನರು ಸ್ಥಳಾಂತರಕ್ಕೂ ಒಪ್ಪುತ್ತಿಲ್ಲ. ಮುಂದೇನು ಮಾಡಬೇಕು ಎಂದು ತಿಳಿಯದಂತಾಗಿದೆ ಎಂದು ಸಚಿವರು ಹೇಳಿದರು.