ಕಡೂರು ತಾಲೂಕು ಎಐಬಿಎಸ್‌ಎಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಎಲ್.ಲಕ್ಷಣ್ ನಾಯ್ಕ ಅವರಿಗೆ ಕಾರ್ಯಾಧ್ಯಕ್ಷ ಎಚ್.ಆರ್.ಪುಟ್ಟಾನಾಯಕ್ ನೇಮಕಾತಿ ಪ್ರಮಾಣ ಪತ್ರ ವಿತರಿಸಿದರು. ರಾಜ್ಯ ಪದಾಧಿಕಾರಿಗಳು ಇದ್ದರು. 
ಜಿಲ್ಲೆ

ಲಂಬಾಣಿ ಎಂದೇ ನಮೂದಿಸಿ

ಎಸ್.ಎನ್.ರವೀಂದ್ರ

ಕಡೂರು: ರಾಜ್ಯ ಸರ್ಕಾರ ಸೆ.22ರಿಂದ ನಡೆಸಲಿರುವ ಸಾಮಾಜಿಕ, ಶೈಕ್ಷಣಿಕ ಗಣತಿಯಲ್ಲಿ ಧರ್ಮ ಹಿಂದು, ಜಾತಿ ಲಂಬಾಣಿ, ಉಪಜಾತಿ ಬಂಜಾರ ಎಂದೇ ನಮೂದಿಸಬೇಕು. ಇದೇ ವೇಳೆ ಸರ್ಕಾರ ಹಿಂದುಳಿದ ವರ್ಗದ ಆಯೋಗದ ಮೂಲಕ ಹೊರಡಿಸಿದ ಅಧಿಸೂಚನೆಯಲ್ಲಿ ಮತಾಂತರ ಹೊಂದಿದವರನ್ನು ಬಂಜಾರ ಕ್ರಿಶ್ಚಿಯನ್, ಲಮಾಣಿ ಕ್ರಿಶ್ಚಿಯನ್, ಲಂಬಾಣಿ ಕ್ರಿಶ್ಚಿಯನ್ ಎಂದು ಗುರುತಿಸಿರುವುದು ನಮ್ಮ ಅಸ್ಮಿತೆಯ ಮೇಲಿನ ದಾಳಿ ಎಂದೇ ಪರಿಗಣಿಸುವುದಾಗಿ ಎಐಬಿಎಸ್‌ಎಸ್ ರಾಜ್ಯ ಕಾರ್ಯಾಧ್ಯಕ್ಷ ಎಚ್.ಆರ್.ಪುಟ್ಟಾನಾಯಕ್ ತಿಳಿಸಿದರು.

ಪ್ರವಾಸಿಮಂದಿರದಲ್ಲಿ ಎಐಬಿಎಸ್‌ಎಸ್(ಆಲ್ ಇಂಡಿಯಾ ಬಂಜಾರ ಸೇವಾ ಸಂಘ) ಜಿಲ್ಲಾಧ್ಯಕ್ಷರಾಗಿ ಟಿ.ಎಲ್.ಲಕ್ಷ್ಮಣ ನಾಯ್ಕ ಅವರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು. ಲಂಬಾಣಿ ಸಮಾಜ ಭಾರತದಾದ್ಯಂತ ವ್ಯಾಪಿಸಿದೆ. ಸುಮಾರು 14 ಕೋಟಿ ಜನಸಂಖ್ಯೆ ಹೊಂದಿರುವ ನಾವು ರಾಷ್ಟ್ರಾದ್ಯಂತ ಒಂದೇ ಭಾಷೆ ಗೋರ್‌ಬೋಲಿ ಬಳಸುವ ಅತಿ ದೊಡ್ಡ ಸಮುದಾಯವಾಗಿದ್ದೇವೆ. ಮೊದಲು ಈ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದ ಅಡಿ ತರಬೇಕು ಎನ್ನುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನಮ್ಮ ಒತ್ತಾಯ. ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡರೆ ಅದು ವೈಯಕ್ತಿಕ. ಸಮುದಾಯದ ಸಂಘಟನೆಗೆ ಹೊಸ ಪದಾಧಿಕಾರಿಗಳು ತಾಂಡಾಗಳಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ, ಗಣತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಲು ಅವರನ್ನು ತಯಾರು ಮಾಡಲು ಮುಂದಾಗಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಲಂಬಾಣಿ, ಭೋವಿ, ಕೊರಚ, ಕೊರಮರಿಗೆ ಶೇ.4.5 ಮೀಸಲಾತಿ ಕಲ್ಪಿಸಿತ್ತು. ನಮ್ಮವರೇ ಅದನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಿದರು. ಈಗಿನ ಸಿದ್ದರಾಮಯ್ಯ ಅವರ ಸರ್ಕಾರ ನ್ಯಾ.ನಾಗಮೋಹನ್‌ದಾಸ್ ಏಕ ಸದಸ್ಯ ಆಯೋಗ ರಚಿಸಿ ಅವರು ಘೋಷಿಸಿದ ಶೇ.4 ಮೀಸಲಾತಿ ಕಲ್ಪಿಸಿಕೊಟ್ಟ ವರದಿಯನ್ನೂ ಮೂಲೆಗೆ ತಳ್ಳಿ, ಅವರದೇ ಲೆಕ್ಕಾಚಾರ ಹಾಕಿ 62 ಹೊಸ ಕೋಮುಗಳನ್ನೂ ನಮ್ಮ ಪಟ್ಟಿಗೆ ಸೇರಿಸಿ ಶೇ.5 ಒಳಮೀಸಲಾತಿ ಘೋಷಿಸಿದ್ದಾರೆ. ನಮ್ಮ ನಾಯಕರು ಯಾರೂ ಅದನ್ನು ಖಂಡಿಸಿಲ್ಲ. ಪರಿಶಿಷ್ಟ ಜಾತಿ ಪಂಗಡಗಳು ಇದ್ದದ್ದೇ ನಾಲ್ಕು. ಈಗ ಅದನ್ನು 101ಕ್ಕೆ ಹೆಚ್ಚು ಮಾಡಿ ಪರಿಕಲ್ಪನೆಯನ್ನೇ ಹದಗೆಡಿಸಿದ್ದಾರೆ ಎಂದು ಆರೋಪಿಸಿದರು.

ಎಐಬಿಎಸ್‌ಎಸ್ ಹಾಸನ ಜಿಲ್ಲಾ ಅಧ್ಯಕ್ಷ ಸೋಮಾನಾಯ್ಕ ಮಾತನಾಡಿ, ಒಳಮೀಸಲಾತಿಯ ಕರಾಳ ಶಾಸನದ ಮೂಲಕ ನಮ್ಮ ಹಕ್ಕನ್ನು ಕಸಿಯುವ ಕೆಲಸ ಆಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡುವ ಸಲುವಾಗಿ ನಾವು ಒಂದೇ ಸಂಘಟನೆ ಅಡಿ ಕೆಲಸ ಮಾಡಿ ಹಳ್ಳಿಯಿಂದ ದೆಹಲಿವರೆಗೂ ನಮ್ಮ ಕೂಗು ಮುಟ್ಟಿಸಬೇಕು ಎಂದರು.

ಜಿಲ್ಲಾಧ್ಯಕ್ಷರಾಗಿ ಲಕ್ಷ್ಮಣ್ ನಾಯಕ್ ಅವರನ್ನು ನೇಮಿಸಿದ್ದು ನಮ್ಮ ಸಮುದಾಯವನ್ನು ಜಾಗೃತಗೊಳಿಸಲು ಕೆಲಸ ಮಾಡಬೇಕಿದೆ. ಎಲ್ಲ ಜಿಲ್ಲೆಗಳಲ್ಲಿ ಅಧ್ಯಕ್ಷರ ನೇಮಕದ ಬಳಿಕ ಸೆ.22ರಿಂದಲೇ ತಾಂಡಾಗಳಲ್ಲಿ ಬಂಜಾರ ಜಾಗೃತಿ ಅಭಿಯಾನ ಆರಂಭಿಸಲಾಗುವುದು. ಒಳಮೀಸಲಾತಿ ಹಂಚಿಕೆ ವಿರೋಧಿಸಿ ಸರ್ಕಾರಕ್ಕೆ ಕೊಟ್ಟ 10 ದಿನಗಳ ಅವಧಿ ಮುಗಿದ ನಂತರ ರಾಜ್ಯವ್ಯಾಪಿ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ನೂತನ ಅಧ್ಯಕ್ಷ ಲಕ್ಷ್ಮಣ್ ನಾಯಕ್ ಮಾತನಾಡಿ, ಈ ಹಿಂದೆ ಇದ್ದ ಸಂಘಗಳೆಲ್ಲವನ್ನೂ ಒಟ್ಟುಗೂಡಿಸಿ ಎಐಬಿಎಸ್‌ಎಸ್ ಸಂಘಟನೆಗೆ ಸೇರಿಸಿಕೊಳ್ಳುವುದರ ಮೂಲಕ ನಮ್ಮ ಸಂಘಟನೆ ಜಿಲ್ಲೆಯ ಹಿರಿಯರು, ಯುವಕರ ಸಹಕಾರದಿಂದ ಬಲಗೊಳಿಸಲು ಶ್ರಮಿಸುತ್ತೇನೆ ಎಂದರು.

ಎಐಬಿಎಸ್‌ಸ್ ಯುವ ಘಟಕದ ರಾಜ್ಯಾಧ್ಯಕ್ಷ ಸುನೀಲ್ ನಾಯಕ್, ಕಾರ್ಯದರ್ಶಿ ರಾಜ್‌ಮಲ್ ನಾಯಕ್, ಬಿ.ಟಿ.ಗಂಗಾಧರ ನಾಯ್ಕ, ಕಾನೂನು ಸಲಹೆಗಾರ ಅನಿಲ್‌ಕುಮಾರ ನಾಯ್ಕ, ಸುನಿಲ್‌ಕುಮಾರ್, ಪುರಸಭೆ ಸದಸ್ಯರಾದ ರವಿಕುಮಾರ ರಾಥೋಡ್, ಪ್ರಶಾಂತ್, ತಾಲೂಕು ಅಧ್ಯಕ್ಷ ಶ್ರೀನಿವಾಸ್ ನಾಯ್ಕ, ರಘು, ಜಯಂತ್, ಸಂತೋಷ್‌ನಾಯ್ಕ, ಮೋಹನ್‌ನಾಯಕ್, ಮಾಲಾ ನಾಯಕ್, ಮಂಜುನಾಥ್ ಇತರರಿದ್ದರು.