ಜಿಲ್ಲೆ

ಲಂಚಾವತಾರ ತಡೆಯುವಂತೆ ಪ್ರತಿಭಟನೆ

ಗುಂಡ್ಲುಪೇಟೆ: ಸಾಮೂಹಿಕ ನಾಯಕತ್ವದ ರೈತ ಸಂಘದ ವತಿಯಿಂದ ತಾಲೂಕಿನ ಕಬ್ಬಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರ, ಪಶುವೈದ್ಯ ಆಸ್ಪತ್ರೆಗಳಲ್ಲಿ ವೈದ್ಯರು ಬಹಿರಂಗವಾಗಿ ಲಂಚ ಪಡೆಯುವುದು ಮತ್ತು ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಆಗದ ಬಗ್ಗೆ ಪ್ರತಿಭಟನೆ ನಡೆಸಲಾಯಿತು.

ಸಾಮೂಹಿಕ ನಾಯಕತ್ವದ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಸಮಾವೇಶಗೊಂಡ ನೂರಾರು ಕಾರ್ಯಕರ್ತರು, ಸಮುದಾಯ ಆರೋಗ್ಯ ಕೇಂದ್ರ, ಪಶುವೈದ್ಯ ಆಸ್ಪತ್ರೆಗಳಲ್ಲಿ ವೈದ್ಯರು ಪಶುಗಳಿಗೆ ಚಿಕಿತ್ಸೆ ನೀಡಲು ಹಾಗೂ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಬಹಿರಂಗವಾಗಿ ಲಂಚ ಪಡೆಯುತ್ತಿದ್ದಾರೆ. ವಾರಕ್ಕೊಮ್ಮೆಯೂ ಪಿಡಿಒ ಕಚೇರಿಗೆ ಭೇಟಿ ನೀಡದಿರುವುದರಿಂದ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಯಾವುದೇ ಕೆಲಸಕಾರ್ಯಗಳು ಆಗುತ್ತಿಲ್ಲ. ಈ ಬಗ್ಗೆ ಪ್ರತಿಭಟನೆ ನಡೆಸಿ ಆಸ್ಪತ್ರೆಯ ಲಂಚಾವತಾರದ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ನಿಷ್ಕ್ರಿಯತೆ ಬಗ್ಗೆ ಜಿಲ್ಲಾ ಪಂಚಾಯಿತಿಗೆ ದೂರು ಸಲ್ಲಿಸಲಾಗಿದೆ. ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ತಾಲೂಕಿನ ಅಗತಗೌಡನಹಳ್ಳಿ ಸಮೀಪದಲ್ಲಿ ಕ್ರಷರ್ ಆರಂಭಿಸಲು ಉದ್ದೇಶಿಸಿರುವ ಜಮೀನಿಗೆ ತೆರಳಿ ಪ್ರತಿಭಟನೆ ನಡೆಸಿದರು. ಕಂದಾಯಾಧಿಕಾರಿಗಳು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸದೆ ಕ್ರಷರ್ ತೆರೆಯಲು ಶಿಫಾರಸ್ಸು ಮಾಡಿದ್ದಾರೆ. ಕ್ರಷರ್ ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದರೂ, ಅದನ್ನು ಗ್ರಾಮಸ್ಥರು ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ರದ್ದುಗೊಳಿಸಬೇಕು. ಕ್ರಷರ್ ಆರಂಭಿಸಿದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಬೇಗೂರು ನಾಡಕಚೇರಿಯ ಕಂದಾಯಾಧಿಕಾರಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಷಣ್ಮುಖಸ್ವಾಮಿ, ನಾಗರಾಜು, ಪರಮೇಶ, ಮಹೇಶ, ಮಲ್ಲು, ಮಹದೇವಪ್ಪ, ಶಿವಪ್ಪ ಹಾಗೂ ಇತರರು ಇದ್ದರು.