ಜಿಲ್ಲೆ

ಲಂಚ ಸ್ವೀಕಾರ ಆರೋಪ ಸಾಬೀತು ಸಹಾಯಕ ಪ್ರಾಧ್ಯಾಪಕಿಗೆ 3 ವರ್ಷ ಜೈಲು ಶಿಕ್ಷೆ


ಮಂಗಳೂರು: ಸಂಶೋಧನಾ ವಿದ್ಯಾರ್ಥಿನಿಯಿಂದ ಲಂಚ ಪಡೆದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಮಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ ರವಿಶಂಕರ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
2012 ರಲ್ಲಿ ವಿದ್ಯಾರ್ಥಿನಿಯೊಬ್ಬರಿಂದ ಪ್ರಭಂದ ಅಂಗೀಕಾರ ಆಗಬೇಕಾದರೆ ಮೈಸೂರಿನಿಂದ ಬರುವ ಬಾಹ್ಯ ಪರಿವೀಕ್ಷಕರ ಖರ್ಚಿಗೆ 16,800 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟು ಮುಂಗಡ ಹಣ 5,000 ರೂ. ಸ್ವೀಕರಿಸುತ್ತಿದ್ದಾಗ ಮಂಗಳೂರು ಲೋಕಾಯುಕ್ತ ನಿರೀಕ್ಷಕರಾದ ಉಮೇಶ್ ಜಿ. ಶೇಟ್ ಮತ್ತು ಸಿಬ್ಬಂದಿ ದಾಳಿ ಮಾಡಿ ಪ್ರಸ್ತುತ ಕೊಣಾಜೆ ಮಂಗಳೂರು ಯುನಿವರ್ಸಿಟಿಯ ಸಮಾಜ ಶಾಸ್ತ್ರದ ಸಹಾಯಕ ಪ್ರೊಪೆಸರ್ ಆಗಿರುವ ಡಾ. ಅನಿತಾ ರವಿಶಂಕರ್ ರವರನ್ನು ಬಂದಿಸಿದ್ದರು. ಸದ್ರಿ ಆರೋಪಿ ಮೊದಲು 10,000 ರೂ. ನಂತರ 4,000 ರೂ. ಮತ್ತು ತದನಂತರ ರೂ. 16,800 ರೂ. ಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಲೋಕಾಯುಕ್ತ ಸಂಸ್ಥೆಯ ಪರವಾಗಿ ಒಟ್ಟು 9 ಸಾಕ್ಷಿದಾರರನ್ನು ನ್ಯಾಯಾಲಯದಲ್ಲಿ ಸಾಕ್ಷಿ ವಿಚಾರಣೆಗೆ ಒಳ ಪಡಿಸಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಕ್ಕೆ ಬಂದ ಹಿನ್ನಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿದೆ. ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿ ಅವರು ಶಿಕ್ಷೆ ಪ್ರಕಟಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಖಾಯಿದೆಯ ಕಲಂ 7 ರ ಅಡಿ ಯಲ್ಲಿ ಎಸಗಿದ ಅಪರಾಧಕ್ಕೆ ಆರೋಪಿಗೆ 2 ವರ್ಷ ಸಾದಾ ಸಜೆ ಮತ್ತು ರೂ. 15,000 ರೂ. ದಂಡ. ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ 3 ವರ್ಷ ಸಾದಾ ಸಜೆ ಮತ್ತು ರೂ. 15,000 ರೂ. ದಂಡ. ದಂಡ ತೆರಲು ತಪ್ಪಿದಲ್ಲಿ ತಲಾ ಒಂದು ತಿಂಗಳುಗಳ ಸಾದಾ ಸಜೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಆದರೆ ಎರಡೂ ಅಪರಾಧಕ್ಕೆ ಸಂಬಂದಿಸಿದ ಶಿಕ್ಷೆಗಳನ್ನು ಅಪರಾಧಿ ಜೊತೆಯಾಗಿ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಆಗಿನ ಲೋಕಾಯುಕ್ತ ಇನ್ಸ್ಪೆಕ್ಟರ್ ಉಮೇಶ್ ಜಿ. ಶೇಟ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.