ಸರಗೂರು: ತಾಲೂಕಿನ ಕೂಲ್ಯ ಗ್ರಾಮದ ಫಲಾನುಭವಿಗಳಿಗೆ ಸಮರ್ಪಕವಾಗಿ ಪಡಿತರ ವಿತರಣೆ ಮಾಡದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಲಂಕೆ ಗ್ರಾಮದ ರುಕ್ಮಿಣಿ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ರದ್ದುಪಡಿಸಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಪಡಿತರದಾರರಿಗೆ ಯೂನಿಟ್‌ಗೆ 6 ಕೆಜಿ ಅಕ್ಕಿಯ ಬದಲು 5 ಕೆಜಿ, ಅಂತ್ಯೋದಯ ಕಾರ್ಡ್‌ಗೆ 35 ಕೆಜಿ ಆಹಾರಧಾನ್ಯದ ಬದಲು ಯೂನಿಟ್‌ವಾರು ವಿತರಣೆ ಮಾಡುತ್ತಿದ್ದರು. ಸೀಮೆಎಣ್ಣೆ ವಿತರಣೆ ಮಾಡುತ್ತಿರಲಿಲ್ಲ. ಜತೆಗೆ ಪಡಿತರದಾರರಿಂದ 10 ರೂ. ಪಡೆಯುತ್ತಿದ್ದು, ತಿಂಗಳಲ್ಲಿ 5-6 ದಿನ ಮಾತ್ರ ವಿತರಣೆ ಮಾಡುತ್ತಿದ್ದರು.
ಈ ಕುರಿತು ಲಂಕೆ ಗ್ರಾಮಸ್ಥರಾದ ಮರಲಿಂಗಯ್ಯ, ಶಿವರಾಜು, ಬಿಲ್ಲಯ್ಯ, ಮಂಜುನಾಥ್, ಶಿವಶಂಕರ್, ಸೋಮು, ದಯಾನಂದ, ದೇವರಾಜು ಎಂಬುವವರು ತಹಸೀಲ್ದಾರ್‌ಗೆ ದೂರು ನೀಡಿದ್ದರು. ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ನಿಂಗರಾಜು ಮಚ್ಚರೆ, ಕರ್ನಾಟಕ ಭೀಮ್ ಸೇನೆ ಸರಗೂರು ತಾಲೂಕು ಅಧ್ಯಕ್ಷ ಮಹೇಂದ್ರ ಹೂವಿನಕೊಳ ಅವರು ಗ್ರಾಮಸ್ಥರಿಗೆ ಬೆಂಬಲ ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಕುಮುದಾ ಅವರು ವಿಚಾರಣೆಗೆ ಕಾಯ್ದಿರಿಸಿ ರುಕ್ಮಿಣಿ ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಪಡಿಸಿದ್ದಾರೆ. ಜತೆಗೆ ಲಂಕೆ ಗ್ರಾಮದ ಪಡಿತರ ವಿತರಣೆಯನ್ನು ಹತ್ತಿರದ ನ್ಯಾಯಬೆಲೆ ಅಂಗಡಿಗೆ ವರ್ಗಾವಣೆ ಮಾಡಬೇಕು, ಜುಲೈ ಅಂತ್ಯಕ್ಕೆ ಉಳಿದಿರುವ ಅಂತಿಮ ಲೆಕ್ಕಪತ್ರ ಪರಿಶೀಲಿಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದ್ದಾರೆ.