ಜಿಲ್ಲೆ

ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿ ಬಂಧನ

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ರಾಷ್ಟ್ರೀಯ ಹೆದ್ದಾರಿ ರಾಬರಿ ಪ್ರಕರಣ ಬೆನ್ನತ್ತಿದ್ದ ನೆಲಮಂಗಲ ಉಪವಿಭಾಗದ ದಾಬಸ್‌ಪೇಟೆ ಪೊಲೀಸರು ಶಿವಗಂಗೆ, ಗೊಟ್ಟಿಗೆರೆ ಕ್ರಾಸ್ ಬಳಿಯ ನೀಲಗಿರಿ ತೋಪಿನ ಸಮೀಪ ಹಳೇ ರೌಡಿಶೀಟರ್ ಜಯಂತ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಸೋಂಪುರ ಹೋಬಳಿ ಹಾಗೂ ದಾಬಸ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ವಾರದಿಂದ ಬೈಕ್ ಕಳವು, ರೋಡ್ ರಾಬರಿ, ಹಸುಗಳ ಕಳವು, ಒಡವೆ, ಮನೆಗಳ್ಳತನ, ಹಲ್ಲೆ ಪ್ರಕರಣ ಹೆಚ್ಚಾಗಿದ್ದವು. ಪ್ರಕರಣ ಭೇದಿಸಲು ವಿಶೇಷ ತಂಡ ರಚಿಸಿದ ದಾಬಸ್‌ಪೇಟೆ ಇನ್‌ಸ್ಪೆಕ್ಟರ್ ಬಿ.ರಾಜು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೃತ್ಯ ಎಸಗುತ್ತಿರುವುದು ಕೊಲೆ, ಕೊಲೆಯತ್ನ, ಕಳ್ಳತನ, ದರೋಡೆ ಸೇರಿ 56 ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್ ಜಯಂತ್ ಎಂಬ ಮಾಹಿತಿ ಕಲೆಹಾಕಿದ್ದ ಪೊಲೀಸರು, ಶಿವಗಂಗೆ ಸಮೀಪ ಬೈಕ್‌ನಲ್ಲಿ ಬರುತ್ತಿದ್ದ ಆರೋಪಿಯನ್ನು ಹೆಡ್ ಕಾನ್‌ಸ್ಟೇಬಲ್ ಇಮ್ರಾನ್ ಮತ್ತು ಸುನೀಲ್ ಬಂಧಿಸಲು
ಮುಂದಾಗಿದ್ದರು. ಈ ವೇಳೆ ಇಮ್ರಾನ್ ಎಡಕೈಗೆ ಚಾಕುವಿನಿಂದ ಜಯಂತ್ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ. ಜೀಪಿನಲ್ಲಿ ಹಿಂಬಾಲಿಸಿ ಬಂದ ಇನ್‌ಸ್ಪೆಕ್ಟರ್ ರಾಜು, ಪಿಸ್ತೂಲ್ನಿಂದ ಗುಂಡು ಹಾರಿಸಿ, ಆರೋಪಿಯನ್ನು ಬಂದಿಸಿದ್ದಾರೆ.
ಗಾಯಾಳು ಜಯಂತ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಹೆಡ್‌ಕಾನ್‌ಸ್ಟೇಬಲ್
ಇಮ್ರಾನ್ ಖಾನ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಬಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.